ಇಸ್ಲಾಂನಲ್ಲಿ ಸ್ವಾರ್ಥಭರಿತ ಆಸೆಗಳಿಗೆ ಸ್ಥಾನವಿಲ್ಲ
✍ - ಎಂ.ಕೆ. ಮೇತ್ರಿ, ವಕೀಲರು.
ಸರ್ವಶಕ್ತನು, ಸರ್ವಜ್ಞನೂ, ಸಕಲ ಲೋಕಗಳ ಸೃಷ್ಟಿಕರ್ತನು, ಸಂರಕ್ಷಕನೂ ಹಾಗೂ ಕೊನೆಗೊಂದು ದಿನ ಸಮಸ್ತ ಸೃಷ್ಟಿಯನ್ನು ನಾಶಪಡಿಸುವವನು ಅಲ್ಲದೆಯೇ ಸಕಲ ಮಾನವಜಾತಿಯ ಜೀವಾತ್ಮರನ್ನು ಮತ್ತೊಮ್ಮೆ ಜೀವಂತ ಗೊಳಿಸುವವನು! ಒಟ್ಟಿನಲ್ಲಿ ಹೇಳಬೇಕಾದರೆ ಸಮಸ್ತ ಲೋಕಗಳ ಏಕೈಕ ಒಡೆಯನಾದ ಅಲ್ಲಾಹನು ಮಾನವನ ಆತ್ಮವನ್ನು ಪರೀಕ್ಷೆಗೆ ಒಳಪಡಿಸಲೆಂದದೇ ಸ್ವಾರ್ಥವೆಂಬ ಪ್ರವೃತ್ತಿಯೊಂದಿಗೆ ಅವನನ್ನು ಸೃಷ್ಟಿಸಿದ್ದಾನೆ. ಕುರಾನ್‌ನ ನೈತಿಕ ಮೌಲ್ಯಗಳನ್ನನುದರಿಸಿ ಮಾನವನು ಜೀವಿಸದೇ ಇದ್ದರೆ ಮತ್ತು ತನ್ನ ಲೌಕಿಕ/ಐಹಿಕ ಆಸೆಗಳನ್ನು ಪಳಗಿಸಿ ಹದ್ದುಬಸ್ತಿನಲ್ಲಿ ಇಟ್ಟುಕೊಳ್ಳದೇ ಇದ್ದರೆ, ಸ್ವಾರ್ಥ ಎಂಬ ಸಾಧನವು ಮಾನವನ ಮೂಲ ಭಾವವಾಗಿ ಆತನ ಸಂಪೂರ್ಣ ಜೀವನ ಶೈಲಿಯ ನೈತಿಕ ಚೌಕಟ್ಟಿನ ಮೇಲೆ ಪ್ರಾಬಲ್ಯವನ್ನು ಸಾಧಿಸಿ, ಸರ್ವರಂಗಗಳಲ್ಲಿ ಅಂದರೇ ಅವನನ್ನು ಇಹ ಮತ್ತು ಪರದಲ್ಲಿಯೂ ಸಂಪೂರ್ಣವಾಗಿ ಮುಜುಗರಕ್ಕೆ ಈಡು ಮಾಡುತ್ತದೆ.
ಸ್ವಾರ್ಥಿಗಳು ಸಾಮಾನ್ಯವಾಗಿ ಎಲ್ಲರಿಗಿಂತ ಹೆಚ್ಚಾಗಿ ಕೇವಲ ತಮಗಾಗಿಯೇ ಮಾತ್ರ ಯೋಚಿಸುತ್ತಾರೆ. ಅವರು ಯಾವಾಗಲೂ ತಮಗಾಗಿ ಅತೀ ಉತ್ತಮವಾದುದ್ದನ್ನು ಮಾತ್ರವೇ ಬಯಸುತ್ತಾರೆ. ಸ್ವಾರ್ಥಿಯಾದವನು ಅತ್ಯುತ್ತಮವಾದ ಮತ್ತು ಪರಿಪೂರ್ಣತೆಯನ್ನು ಹೊಂದಿದ ವಸ್ತುಗಳನ್ನು ಮಾತ್ರ ತನಗಾಗಿ ಬಯಸುತ್ತಾನೆ. ಅವನು ಅತೀ ಹೆಚ್ಚಿನ ಆಸ್ತಿ, ಅಂತಸ್ತು ಮತ್ತು ಉತ್ತಮ ಮಕ್ಕಳನ್ನು ಹೊಂದಲು ಬಯಸುತ್ತಾನೆ ಅನ್ಯರ ಆಸ್ತಿ, ಅಂತಸ್ತನ್ನು ಕಂಡು ಒಳಗೊಳಗೇ ಮರಗುವದಲ್ಲದೆ ಅವರ ಹಾನಿಗಾಗಿ ಹಾತೊರೆಯುತ್ತಿರುತ್ತಾನೆ. ಅದಲ್ಲದೇ ತಾನು ಮತ್ತು ತನ್ನ ಸ್ವಂತ ಕುಟುಂಬ ಮಾತ್ರ ಆರಾಮದಾಯಕವಾಗಿರಲು ಬಯಸುತ್ತಾನೆ. ತೊಂದರೆಗಳು ಎದುರಾದಾಗ, ಅವನ ಸುತ್ತಲಿನ ಜನರು ತನಗಾಗಿ ಎಲ್ಲ ರೀತಿಯ ಅಪಾಯಗಳು ಮತ್ತು ಹಾನಿಗಳನ್ನು ಅನುಭವಿಸಲಿ ಎಂದೂ ಬಯಸುತ್ತಾನೆ ಮತ್ತು ಅನ್ಯರು ಅವನಿಗಾಗಿ ತಮ್ಮ ತಮ್ಮ ಸ್ವ-ಹಿತಾಸಕ್ತಿಗಳನ್ನು ಬದಿಗಿಟ್ಟು ತನ್ನನ್ನು ರಕ್ಷಿಸಲಿ ಎಂದು ಆಶಿಸುತ್ತೇನೆ, ಎಲ್ಲಾ ಕಠಿಣ ಪರಿಸ್ಥಿತಿಯಲ್ಲಿಯೂ ತನ್ನನ್ನೇ ಬೆಂಬಲಿಸಲಿ ಎಂದು ನಿರೀಕ್ಷಿಸುತ್ತಾನೆ. ಅವನು ತನ್ನ ಆಸೆ-ಆಕಾಂಕ್ಷೆಗಳನ್ನು ಮತ್ತು ಹಿತಾಸಕ್ತಿಯನ್ನು ರಕ್ಷಿಸಲು ಮತ್ತು ತನ್ನದೇ ಆದ ಸೌಲಭ್ಯ ಮತ್ತು ಸೌಕರ್ಯಗಳ ರಕ್ಷಣಗೋಸ್ಕರ ಸದಾಕಾಲ ಪ್ರಯತ್ನಿಸುತ್ತಾನೆ.
ಪರಿಸ್ಥಿತಿಯು ವಿಭಿನ್ನವಾದಾಗ ಅಥವಾ ತನ್ನ ನಿಯಂತ್ರಣದಿಂದ ದಾಟಿ ಅತಿರೇಕಕ್ಕೆಹೋದಾಗ ಅವನು ತನ್ನ ಸ್ವಂತ ಹಿತಾಸಕ್ತಿಗಳನ್ನು ಮಾತ್ರ ರಕ್ಷಿಸುವ ಉದ್ದೇಶದಿಂದ ಮತ್ತು ತನ್ನ ಕಡೆಗೆ ಬರುವ ಯಾವುದೇ ಅನಿರೀಕ್ಷಿತ ಹಾನಿಯನ್ನು ತಡೆಗಟ್ಟುವ ಸಲುವಾಗಿ, ಸ್ವಾರ್ಥಿಯು ಆ ಹಾನಿಯನ್ನು ಮತ್ತೊಬ್ಬರಕಡೆಗೆ ತಿರುಗಿಸಲೂ ಸಹಿತ, ಹಿಂದೆ ಜರಿಯಲಾರನು, ಸ್ವ-ರಕ್ಷಣೆಯ ನಿಟ್ಟಿನಲ್ಲಿ ತನ್ನ ಮೌಲ್ಯಯುತವಾದ ಅಥವಾ ಅಮೂಲ್ಯವಾದ ವಸ್ತುಗಳನ್ನು, ಸ್ಥಿರ/ಚರ ಆಸ್ತಿಗಳನ್ನು ಅಥವಾ ಅವಶ್ಯವೆನಿಸಿದರೆ ತನ್ನವರನ್ನೂ ಕೂಡ ಬಲಿಕೊಡಲು ಸಿದ್ಧನಾಗಿರುತ್ತಾನೆ. ಮಾನವನ ಭಾವೋದ್ರಿಕ್ತ ಲೌಕಿಕ ಬಯಕೆಗಳಲ್ಲಿ ಈ ಸ್ವಾರ್ಥ ಎಂಬ ಐಹಿಕ ಭಾವನೆಯನ್ನು ಅಲ್ಲಾಹನು ಕುರಾನ್‌ನಲ್ಲಿ ಈ ಕೆಳಗಿನಂತೆ ಬಹಿರಂಗಪಡಿಸಿದ್ದಾನೆ: "ವಾಸ್ತವವಾಗಿಯೂ, ಮನುಷ್ಯನು ಸಹನೆ/ತಾಳ್ಮೆ ಇಲ್ಲದವನಾಗಿ ರಚಿಸಲ್ಪಟ್ಟಿದ್ದಾನೆ - ಕೆಟ್ಟ ಸಂಗತಿಗಳು ಸಂಭವಿಸಿದಾಗ ಹತಾಶನಾಗಿ ಸಂಕಟಪಡುತ್ತಾನೆ, ಒಳ್ಳೆಯದು ಬಂದಾಗ ತಡೆ ಹಿಡಿಯುತ್ತಾನೆ/(ಜಿಪುಣ ನಾಗುತ್ತನೆ)." (ಕುರಾನ್, 70:19-21)
ಆಧುನಿಕ ಸಮಾಜದ ಅತೀದೊಡ್ಡ ಅಪಾಯವೆಂದರೆ ಸ್ವಾರ್ಥವೇ ಆಗಿದೆ. ಧಾರ್ಮಿಕ ಮತ್ತು ನೈತಿಕ ಮೌಲ್ಯಗಳಿಂದ ದೂರವಾಗಿ ಬದುಕುವ ಆಧುನಿಕ ಸಮಾಜದಲ್ಲಿ ವ್ಯಾಪಕವಾಗಿ ಹರಡಿರುವ ಭೌತಿಕವಾದಿ ಮತ್ತು ಲೌಕಿಕವಾದಿ ಚಿಂತನೆಯು ಮಾನವ ಸ್ವಭಾವದಲ್ಲಿ ಸ್ವಾರ್ಥ ಮತ್ತು ಅಹಂಕಾರದ ಮನೋಭಾವವನ್ನು ಬಲಪಡಿಸುತ್ತದೆ "ನಾನು-ಮೊದಲು" & "ನನಗೆ-ಮೊದಲು" ಎಂಬ ಅನೈತಿಕತೆಯನ್ನೇ ನ್ಯಾಯಸಮ್ಮತವಾದ ತಾತ್ವಿಕತೆ ಎಂಬಂತೆ ಪ್ರಚಾರ ವ ಪ್ರಸಾರ ಮಾಡುತ್ತಿರುತ್ತಾನೆ ಮೋಸಗಾರಿಕೆಯನ್ನ ಕಲೆ ಎಂಬಂತೆಯೂ ದ್ರೋಹವನ್ನು ಕೌಶಲ್ಯವೆಂಬಂತೆಯೂ ಬಿಂಬಿಸುತ್ತಾನೆ . ವಾಸ್ತವವಾಗಿ, "ನಾನು ಚೆನ್ನಾಗಿ ಇರುವವರೆಗೆ, ಬೇರೆಯಾರಿಗೆ ಏನಾದ್ರೆ ನನಗೇನು?" ಅಥವಾ "ನಾನೇ ಗೆಲ್ಲಬೇಕು / ನಾನು ಮಾತ್ರ ಸಾಧಿಸಬೇಕು / ಮೊದಲನೇ ಸ್ಥಾನದಲ್ಲಿ ನಾನೇ ಇರಬೇಕು/ " ಎಂದು ಎದುರು ನೋಡುತ್ತಿರುವ ಜನ ಸಾಮಾನ್ಯವಾಗಿ ಅಂತಹ ಸ್ವಾರ್ಥಿಗಳ ಸಮಾಜಕ್ಕೆ ಸೂಕ್ತವಾಗಿ ಪ್ರತಿನಿಧಿಸುತ್ತಾರೆ.
ಹೀಗಾಗಿ ದೀನರು, ದಲಿತರು, ಶೋಷಿತರು, ಪೀಡಿತರು, ಶಿಕ್ಷಣದಿಂದ ವಂಚಿತರೂ ಮತ್ತು ತುಳಿತಕ್ಕೊಳಗಾದ ಬಡ ಜನರು; ವಿಶೇಷವಾಗಿ ಇಂತಹ ಸಮುದಾಯಗಳ ಮಹಿಳೆಯರು, ವಿದುವೆಯರು ಮತ್ತು ಅವರ ಅನಾಥ ಮಕ್ಕಳು ಮೂಲಭೂತ ಅವಶ್ಯಕತೆಗಳಾದ ಶಿಕ್ಷಣ ಮತ್ತು ಆಹಾರವಿಲ್ಲದೆ ಬಳಲುತ್ತಿದ್ದಾರೆ; ಅಂತಹ ಜನರ ಮೇಲೆ ಈ ಸ್ವಾರ್ಥಿಗಳು ಕಿಂಚಿತ್ತೂ ಕರುಣೆಯನ್ನು ತೋರುವುದಿಲ್ಲ ಅವರ ಬಗ್ಗೆ ತಿಳಿದುಕೊಳ್ಳುವ ಕನಿಷ್ಠಮಟ್ಟದ ಆಸಕ್ತಿಯೂ ಅವರಿಗೆ ಇರುವುದಿಲ್ಲ. ವರ್ಣ, ಜಾತಿ, ಸಂಪತ್ತು ಮತ್ತು ಕರ್ಮದ ಆಧಾರದ ಮೇಲೆ ಹಂಚಲಾದ ಈ ಸಾಮಾಜಿಕ ರಚನೆಯು ಸಾಮಾನ್ಯವಾಗಿ ಕೆಳ ಸಮುದಾಯಗಳ ತೊಂದರೆಗಳಿಗೆ ಮತ್ತು ಅವರಲ್ಲಿ ಒಂದು ಅತೃಪ್ತಕರ ವಾತಾವರಣದ ಸೃಷ್ಠಿಗೆ ಕಾರಣವಾಗುತ್ತದೆ, ಇಂತಹ ಜನರು ರೊಚ್ಚಿಗೆದ್ದು ಕ್ರಾಂತಿಗೆ ಅಣಿಯಾದಾಗ ಇದೆ ಸ್ವಾರ್ಥಿಗಳು ಅವರನ್ನು ಸಮಾಜ ವಿರೋಧಿ, ರಾಷ್ಟ್ರ ವಿರೋಧಿ ಅಥವಾ ಇನ್ನೂ ಬೇರೆ ಬೇರೆ ಹೆಸರು ಗಳಿಂದ ಗುರುತಿಸಿ ಅವರ ಮೇಲೆ ಶಸ್ತ್ರಾಸ್ತ್ರ ಕಾರ್ಯಾಚರಣೆಯನ್ನು ಮಾಡಲು ರಾಜಕೀಯ, ಆರ್ಥಿಕ ಮತ್ತು ತಮ್ಮ ಇತರೆ ಎಲ್ಲ ಶಕ್ತಿಗಳನ್ನು ದುರುಪಯೋಗ ಮಾಡಿಕೊಂಡು ಶೋಷಿತರಿಗೆ ಇನ್ನಷ್ಟು ಶೋಷಣೆಯನ್ನೇ ಮಾಡುತ್ತಾರೆ. ಇದಕ್ಕೆ ಕೊನೆ ಯಾವಾಗ?.
ಕುರಾನ್‌ನಲ್ಲಿ ತೋರಿದ ನೈತಿಕ ಮೌಲ್ಯಗಳನ್ನಾಧರಿಸಿ ಬದುಕುವ ಜನರು ತಮ್ಮ ಸರ್ವಸ್ವವನ್ನೂ ದೈವ ಕೃಪೆಗಾಗಿ ಮೀಸಲು ಇಟ್ಟು ಹೋರಾಡುತ್ತಾರೆ, ಯಾವುದೇ ಸ್ವಯಂ ಲಾಭಕ್ಕೆ ಮಾರುಹೋಗಲಾರರು, ಅಂತಹ ದೈವ ಪ್ರೇಮ ಹಾಗೂ ಭಕ್ತಿ ಉಳ್ಳವರು ಮಾತ್ರ ಇಂತಹ ಕಲುಷಿತ ಸಮಾಜದಲ್ಲಿ ಯಾವುದೇ ರೀತಿಯ ಬದಲಾವಣೆಯನ್ನು ತರಲು ಆಸಕ್ತರು ಮತ್ತು ಸಮರ್ಥರು ಆಗಿರುತ್ತಾರೆ, ಅವರಲ್ಲಿ ದೈವ ಭಯ, ಭಕ್ತಿ ಹಾಗೂ ಪ್ರಾಮಾಣಿಕತೆ ಇರುವುದರಿಂದ ಅವರು ಯಾರಿಗೂ ಅನ್ಯಾಯ ಮಾಡಲಾರರು, ಇನ್ನೊಬ್ಬರ ಮೂಲ ಅಧಿಕಾರ ಹಾಗೂ ಯಾವುದೇ ರೀತಿಯ ಹಕ್ಕುಗಳಿಗೆ ಚ್ಯುತಿಯನ್ನು ತರದೇ ಸುಗಮವಾದ ರೀತಿಯಲ್ಲಿ ಸಾಮಾಜಿಕ ಸಮಾನತೆಯನ್ನೂ, ಅರ್ಥಪೂರ್ಣವಾದ ನ್ಯಾಯಪ್ರಕ್ರಿಯೆಯನ್ನೂ ಪ್ರತಿಷ್ಟಾಪಿಸುವವರು; ಕುರಾನ್ ಅನುಯಾಯಿಗಳು ಮಾತ್ರ ಹದಗೆಟ್ಟುಹೋದ ಸಮಾಜವನ್ನು ಸ್ವಚ್ಚಗೊಳಿಸುವ ಹಾಗೂ ಸ್ವಾರ್ಥಭರಿತ ಹಿತಾಸಕ್ತಿಯುಳ್ಳ ಜನರನ್ನು ಅಧಿಕಾರದಿಂದ ಕೆಳಗಿಳಿಸಿ ಸಾಮಾಜಿಕ ಮೌಲ್ಯಗಳನ್ನು ಮರು ಪ್ರತಿಷ್ಠಾಪಿಸುವ, ಜನಸಾಮಾನ್ಯರ ಮನಸ್ಸುಗಳನ್ನು ಬದಲಾಯಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ. "ಯಾರು ಕೇವಲ ತಮ್ಮ ಸ್ವ-ಹಿತಾಸಕ್ತಿಗಳನ್ನು ರಕ್ಷಿಸುವವರೋ ಮತ್ತು ಅನ್ಯರ ಹಕ್ಕು ಉಲ್ಲಂಘಿಸುತ್ತಾರೆಯೋ; ಮತ್ತು ಯಾರು ಅಲ್ಲಾಹನ ಕುರಿತು ಪ್ರೀತಿ ಅಥವಾ ಭಯವನ್ನು ಹೊಂದಿರುವುದಿಲ್ಲವೋ ಅವರನ್ನು ನಿಗ್ರಹಿಸುವುದು ಹಾಗೂ ಅವರು ತಮ್ಮ ಸ್ವಂತ ಹಿತಾಸಕ್ತಿಗಳ ಅನುಸರಣೆಯಲ್ಲಿ ಸಮಾಜಕ್ಕೆ ಹಾಗೂ ಮಾನವ ಜಾತಿಗೆ ತೊಂದರೆಯನ್ನುಂಟುಮಾಡುವ ಪ್ರತಿಯೊಂದು ಕಾರ್ಯಗಳನ್ನು ತಡೆಹಿಡಿದು ನಿಶಕ್ತ ಹಾಗೂ ಮುಗ್ಧ ಜನರನ್ನು ಅಂತಹ ಶೋಷಕರಿಂದ ರಕ್ಷಣೆ ಮಾಡುವುದು ಕೂಡ ನಿಜವಾದ ದೈವಭಕ್ತರ ಸಾಮಾಜಿಕ ಜವಾಬ್ದಾರಿಯಾಗಿದೆ.
ಇಸ್ಲಾಂ ಧರ್ಮವು ಸಮಾಜದ ಪ್ರತಿಯೊಂದು ರಂಗದಲ್ಲಿ ಅಲ್ಲಾಹನ ಕುರಿತು ಪ್ರೇಮ ಮತ್ತು ಭಕ್ತಿಪೂರ್ವಕವಾದ ಭಯವನ್ನು ಬೆಳೆಸುತ್ತದೆ ಮತ್ತು ಕುರಾನ್‌ನ ನೈತಿಕ ಮೌಲ್ಯಗಳ ಮೂಲದಲ್ಲಿ ಅಡಗಿರುವ "ಸಹಾನುಭೂತಿ" ಮತ್ತು "ಪರಸ್ಪರ ಸಹಾಯ"ದಂತಹ ಉತ್ತಮ ನೈತಿಕ ಮೌಲ್ಯಗಳನ್ನು ಪಡೆದುಕೊಳ್ಳುವ ಏಕೈಕ ಮಾರ್ಗವೇ ಅಲ್ಲಾಹನೊಂದಿಗೆ ಹೊಂದುವ ನಿಸ್ವಾರ್ಥ ಪ್ರೇಮವಾಗಿದೆ.
ಅಲ್ಲಾಹನ ಭಯ ಮತ್ತು ಪ್ರೀತಿಯು ಜನರು ತಮ್ಮನ್ನು ತಾವು ಆತನಿಗೆ ಸಂಪೂರ್ಣವಾಗಿ ಶರಣಾಗಿಸಲು ಅಥವಾ ಮಹಾಮಹಿಮ ದೇವನನ್ನು ಒಪ್ಪಿಕೊಳ್ಳಲು ಹಾಗೂ ಕೇವಲ ಉತ್ತಮವಾದದ್ದನ್ನು ಮಾತ್ರ ಆಯ್ಕೆ ಮಾಡಿಕೊಂಡು ಅನುಸರಿಸಲು ಮತ್ತು ಸೃಷ್ಟಿಯ ಎಲ್ಲಾ ಚರಾಚರಗಳ ಕುರಿತು ಸಹಾನುಭೂತಿಯನ್ನು ಹೊಂದಲು ಅನುವು ಮಾಡಿಕೊಡುತ್ತದೆ. ತನ್ನ ಪವಿತ್ರ ವಾಕ್ಯಗಳಲ್ಲಿ ಅಲ್ಲಾಹನು ಸತ್ಯವಿಶ್ವಾಸಿಗಳ ಕುರಿತು ಕಾಳಜಿಯುಕ್ತ ತನ್ನ ವಿಶೇಷ ಆಸಕ್ತಿಯನ್ನೂ ಹಾಗೂ ತನ್ನ ಅನುಮೋದನೆಯನ್ನು ಹೀಗೆ ಅನಾವರಣಗೊಳಿಸುತ್ತಾನೆ: “ಅವರು (ಇಹಲೋಕದಲ್ಲಿ) ತಮ್ಮ ಪ್ರತಿಜ್ಞೆಗಳನ್ನು ಪೂರೈಸುತ್ತಾರೆ ಮತ್ತು ತನ್ನ ವಿಕೋಪವನ್ನು/ದುಷ್ಟತನವು ದೂರದವರೆಗೆ ಹರಡುವ (ಆ) ದಿನಕ್ಕೆ ಭಯಪಡುತ್ತಾರೆ. ಅವರು ತಮಗೆ ತುಂಬಾ ಇಷ್ಟವಾದ ಆಹಾರವನ್ನು ಕೂಡ ಬಡವರಿಗೆ, ಅನಾಥರಿಗೆ ಮತ್ತು (ತಮ್ಮ ಅಡಿಯಲ್ಲಿ) ಬಂಧಿತರಿಗೆ ಆಹಾರವನ್ನು ಕೊಡುತ್ತಾರೆ, (ತಮ್ಮ ಮನಸ್ಸಿನಲ್ಲಿ ಹೀಗೆ ಅಂದುಕೊಳ್ಳುತ್ತಾರೆ) ‘ನಾವು ಅಲ್ಲಾಹನ ಪ್ರಸನ್ನತೆಯನ್ನ ಪಡೆಯುವ ಬಯಕೆಯಿಂದ ಮಾತ್ರ ನಿಮಗೆ ಆಹಾರವನ್ನು ನೀಡುತ್ತೇವೆ. ನಿಮ್ಮಿಂದ ಯಾವುದೇ ಪ್ರತಿಫಲ ಅಥವಾ ಯಾವುದೇ ರೀತಿಯ ಧನ್ಯವಾದಗಳನ್ನು ನಾವು ಬಯಸುವುದಿಲ್ಲ. ನಿಜವಾಗಿಯೂ ನಮಗೆ ನಮ್ಮ ಸಂರಕ್ಷಕನ, ಹಾಗೂ ಪ್ರಜ್ವಲಿಸುವ ವಿಪತ್ತಿನ ಆ ಘೋರವಾದ ದಿನದ ಭಯವಿದೆ.’ ಆದ್ದರಿಂದ ಅಲ್ಲಾಹನು ಅವರನ್ನು ಆ ದಿನದ ವಿಪತ್ತಿನಿಂದ ರಕ್ಷಿಸಿದ್ದಾನೆ ಮತ್ತು ಪ್ರಕಾಶಮಾನವಾದ ಮತ್ತು ಪರಿಶುದ್ಧ ಸಂತೋಷವನ್ನು ಅವರಿಗಾಗಿ ದಯಪಾಲಿಸಿದನು. (ಕುರಾನ್, 76:7-11)
ಪವಿತ್ರ ಪ್ರವಾದಿ (ಸ) ಹೇಳಿದರು: "ತನ್ನ ನೆರೆಹೊರೆಯವರು ಹಸಿದಿರುವಾಗ ಹೊಟ್ಟೆ ತುಂಬಿ ಮಲಗುವವನು ನಮ್ಮಲ್ಲಿ ಒಬ್ಬನಲ್ಲ." ಅಲ್ಲಾಹನ ಸಮ್ಮತಿಯನ್ನು ಪಡೆಯಲು ಬಯಸುವ ಎಲ್ಲಾ ವಿಶ್ವಾಸಿಗಳಿಗೆ ಇದು ಅತೀ ಪ್ರಮುಖ ಎಚ್ಚರಿಕೆಯಾಗಿದೆ. ಆದ್ದರಿಂದ, ಅಲ್ಲಾಹನ ಕೃಪೆಯನ್ನು ಗಳಿಸುವ ಉದ್ದೇಶವನ್ನು ಹೊಂದಿರುವ ಯಾರೇ ಆದರೂ ಕೇವಲ ತಮ್ಮ ಸ್ವಂತ ಸಮಸ್ಯೆಗಳಿಗೆ ಪರಿಹಾರವನ್ನು ಹುಡುಕುವದಿಲ್ಲ; ಬದಲಾಗಿ ತಮ್ಮ ಸುತ್ತಲಿರುವ ಅಗತ್ಯತೆ ಹೊಂದಿರುವ ಇತರರ ಸಮಸ್ಯೆಗಳನ್ನು ಪರಿಹರಿಸುವ ಜವಾಬ್ದಾರಿಯನ್ನು ಸಹ ಅವರು ವಹಿಸಿಕೊಳ್ಳುತ್ತಾರೆ.
ಜನರು ತಾವು ಇಷ್ಟಪಡುವ ವಸ್ತುಗಳನ್ನು ತ್ಯಜಿಸಲು ಅಥವಾ ತಮ್ಮ ಸ್ವಂ ಸೌಕರ್ಯವನ್ನು, ಸುಖ-ಸಂಪತ್ತನ್ನು ತ್ಯಾಗ ಮಾಡುವ ಅವಶ್ಯಕತೆಯೂ ಖಂಡಿತವಾಗಿಯೂ ಇದ್ದೇಇದೆ. ಬಡವರನ್ನು ರಕ್ಷಿಸುವಲ್ಲಿ ಮತ್ತು ಅವರ ಅಗತ್ಯತೆಗಳನ್ನು ಕುರಿತು ವೀಕ್ಷಿಸುವಲ್ಲಿ ಮುಸ್ಲಿಮರು ನೋಡುವ ಶೈಲಿ ಹೆಗಿರುವುದೆಂದರೆ, ಕಷ್ಟದಲ್ಲಿರುವ ಜನರ ಸಾಲಗಳನ್ನು ತಾವು ಭರಿಸುತ್ತಾರೆ ಈ ಮೂಲಕ ತಮ್ಮ ಆಸ್ತಿಯನ್ನು ಸಂಗ್ರಹಿಸುವ ಬದಲು ಅಲ್ಲಾಹನ ಮಾರ್ಗದಲ್ಲಿ ಖರ್ಚು ಮಾಡುವ ಮೂಲಕ ಪವಿತ್ರ ಕುರಾನಿನಲ್ಲಿ ಹೇಳಲಾದ ನೈತಿಕ ಮೌಲ್ಯಗಳು ಶ್ರೇಷ್ಠ ಗುಣಗಳನ್ನು ತಮ್ಮ ವ್ಯಕ್ತಿತ್ವದಲ್ಲಿ ರೂಡಿಗತ ಮಾಡಿಕೊಳ್ಳುತ್ತಾರೆ.
ಜನರ ಅಗತ್ಯಗಳಿಗೆ ಸ್ಪಂದಿಸುವುದು, ಅವರ ಬೇಕು ಬೇಡಗಳಿಗೆ ಪ್ರತಿಕ್ರಿಯಿಸುವುದು, ಅವರನ್ನು ಕುರಿತು ದಯೆಯಿಂದ ನಡೆದುಕೊಳ್ಳುವುದು... ಇವೆಲ್ಲವೂ ಕೂಡ ಆತ್ಮಸಾಕ್ಷಿಯ ಕ್ಷೀಣತೆಯನ್ನು ತಡೆಯುವ ಮಾನವ-ನಡವಳಿಕೆಯ ಮೂಲಸೂತ್ರಗಳಾಗಿವೆ. ಇತರರೊಂದಿಗೆ ಸಹಾನುಭೂತಿ, ನಿರ್ಗತಿಕರನ್ನು ಪ್ರೀತಿಸುವುದರಿಂದ ಮತ್ತು ಗೌರವಿಸುವುದರಿಂದ ನಮ್ಮಲ್ಲಿರುವ ಕ್ರೌರ್ಯ, ತಾತ್ಸಾರ ಮನೋಭಾವ ಮತ್ತು ಸ್ವಾರ್ಥವನ್ನು ತೊಡೆದುಹಾಕಲು ಸಾಧ್ಯವಾಗುತ್ತದೆ. ಪವಿತ್ರ ಕುರಾನಿನ ಶ್ಲೋಕಗಳು ಬಹಿರಂಗಪಡಿಸುವ ಪ್ರಕಾರ ನಮ್ಮ ಉತ್ತಮ ನಡವಳಿಕೆಯ ಪ್ರತಿಫಲವು ಅಲ್ಲಾಹನ ಸನಿಹದಲ್ಲಿ ಮಾತ್ರ ಬರುತ್ತದೆ: “ಅಲ್ಲಾಹನನ್ನು ಆರಾಧಿಸಿ ಮತ್ತು ಅವನೊಂದಿಗೆ ಏನನ್ನೂ(ಯಾರನ್ನೂ) ಸಂಯೋಜಿಸಬೇಡಿ. ನಿಮ್ಮ ಹೆತ್ತವರಿಗೆ, ಸಂಬಂಧಿಕರಿಗೆ, ಅನಾಥರಿಗೆ, ಬಡವರಿಗೆ, ಮತ್ತು ನಿಮಗೆ ಸಂಬಂಧಿಸಿರುವ ನೆರೆಹೊರೆಯವರಿಗೆ ಮತ್ತು ನಿಮಗೆ ಸಂಬಂಧವಿಲ್ಲದ ನೆರೆಹೊರೆಯವರಿಗೆ ಮತ್ತು ಸಹಚರರಿಗೆ ಮತ್ತು ಪ್ರಯಾಣಿಕರಿಗೆ ಮತ್ತು ನಿಮ್ಮ ಗುಲಾಮರಿಗೆ ಒಳ್ಳೆಯವರಾಗಿರಿ/ಉಪಕಾರಮಾಡಿರಿ. ನಿಸಂಶಯವಾಗಿ ಜಂಬ ಕೊಚ್ಚಿಕೊಳ್ಳುವವರನ್ನು ಮತ್ತು ಆಹಂಕಾರಿಗಳನ್ನು ಅಲ್ಲಾಹನು ಪ್ರೀತಿಸುವುದಿಲ್ಲ." (ಕುರಾನ್, 4:36)
ಸತ್ಯವಿಶ್ವಾಸವು ಜನರ ನಡವಳಿಕೆಯನ್ನು ಪರಿಪೂರ್ಣಗೊಳಿಸುತ್ತದೆ, ಅದು ಇನ್ನೂ ಹತ್ತು-ಹಲವು ಗುಣಲಕ್ಷಣಗಳನ್ನು ತಯಾರುಮಾಡುತ್ತದೆ. ಧಾರ್ಮಿಕ ನೈತಿಕ ಮೌಲ್ಯಗಳಿಗೆ ಅಗತ್ಯವಿರುವಂತೆ ತಮ್ಮ ಆತ್ಮಸಾಕ್ಷಿಯನ್ನು ನಿರಂತರವಾಗಿ ಅನುಸರಿಸುವ ಜನರು ಯಾವಾಗಲೂ ಅತ್ಯುತ್ತಮ, ಅತ್ಯಂತ ಪರಿಗಣನೆಗೆ ಪಾತ್ರವಾದ ರೀತಿಯಲ್ಲಿ ವರ್ತಿಸುತ್ತಾರೆ, ಅವರು ವ್ಯಕ್ತಿತ್ವವು ವಿಶ್ವಸನೀಯ, ಸ್ಫೂರ್ತಿದಾಯಕ ಹಾಗೂ ಸಹಿಷ್ಣುತಾಪೂರ್ಣ ಆಗಿರುತ್ತದೆ.
ಈ ನೈತಿಕ ಗುಣಗಳನ್ನು ಹೊಂದಿರುವ ವ್ಯಕ್ತಿ ಯಾರೇ ಆಗಲಿ ಇಹಲೋಕದಲ್ಲಿ ಸರ್ವರ ಪ್ರೀತಿಗೆ ಪಾತ್ರನಾಗುವದಲ್ಲದೆ ತನ್ನ ಮುಂದಿನ ಜೀವನಕ್ಕಾಗಿ (ಪರಲೋಕದಲ್ಲಿ) ಬೇಕಾಗಿರುವ ಎಲ್ಲ ಅರ್ಹತೆನಗಳನ್ನೂ ಗಳಿಸಿಕೊಂಡಿದ್ದಾನೆ ಎಂದರ್ಥ. ಈ ಪ್ರಪಂಚವನ್ನು ಸ್ವ-ಆಸಕ್ತಿ ಮತ್ತು ಸ್ವಾರ್ಥವೆಂಬ ಅನವಶ್ಯಕ ಭಾವಗಳಿಂದ ಮುಕ್ತಗೊಳಿಸಲು ಮತ್ತು ಮಾನವ ಕೇಂದ್ರಿತ ಪ್ರಪಂಚವನ್ನು ತಯಾರುಮಾಡುವಲ್ಲಿ ಅವನು ಪ್ರಮುಖ ಪಾತ್ರ ವಹಿಸಲಿದ್ದಾನೆ. ಇಲ್ಲಿ ಅತೀ ಪ್ರಮುಖವಾಗಿ ನಾವು ಪರಿಗಣಿಸಬೇಕಾದಅಂಶಗಳೆಂದರೆ, ಇಸ್ಲಾಂನಲ್ಲಿ ಪ್ರತಿಯೊಬ್ಬ ವ್ಯಕ್ತಿಯ ಘನತೆ, ಗೌರವ ಮತ್ತು ಸಾಮಾಜಿಕ ಸ್ಥಾನಮಾನವೆಲ್ಲವೂ ಆತನ ನಂಬಿಕೆ, ನಡವಳಿಕೆ ಮತ್ತು ಕಾರ್ಯಪ್ರವೃತ್ತಿಯಲ್ಲಿ ಅಡಗಿದೆಯೆ ಹೊರತು ಅವನ ಜನ್ಮಸ್ಥಾನ, ಕುಲ, ಗೋತ್ರ, ಲಿಂಗ ಋಷಿಮೂಲ ಅಥವಾ ಜಾತಿ-ವರ್ಣದಲ್ಲಿ ಅಡಗಿಲ್ಲ. ಸ್ವಾರ್ಥವೂ ಒಂದೇ ರೀತಿಯಲ್ಲಿ ಇರುವದಿಲ್ಲ ಸಂದರ್ಭ ಸನ್ನಿವೇಶಕ್ಕೆ ತಕ್ಕಂತೆ ರನ್ನ ಪರೀಧಿ ಮತ್ತು ಸ್ವರೂಪವನ್ನು ಬದಲಿಸುತ್ತಲೇ ಇರುತ್ತದೆ. ಒಡಹುಟ್ಟಿದವರ ಮಧ್ಯ ಬಂದಾಗ ತನ್ನ ಮಡದಿ ಮಕ್ಕಳಿಗೆ ಪರವಹಿಸುತ್ತದೆ, ಅದೇ ಮಡದಿಯ ವಿರುದ್ಧ ಬಂದಾಗ ತನ್ನ ಅಹಂ ಮಾತ್ರ ಬಯಸುತ್ತದೆ, ದಾಯಾದಿಗಳ ಮಧ್ಯ ಇರಿಸುಮುರಿಸು ಆದಾಗ ಒಡಹುಟ್ಟಿದವರು ನನ್ನವರು ಎನ್ನುತ್ತೆ, ಪರಸ್ಥಳದಲ್ಲಿ ಸಿಕ್ಕ ತನ್ನೂರವ್ಯಕ್ತಿ ನನ್ನವನು ಅನಿಸುತ್ತೆ, ಅವನ ಜಾತಿ-ಧರ್ಮ ನನದಲ್ಲ ಎಂದಾಗ ದೂರತಳ್ಳುತ್ತೆ. 'ಧರ್ಮವೆನ್ನುವುದು ಮಹಾಮಹಿಮ ದೇವನಾದ ಅಲ್ಲಾಹನ ಸಾಮಿಪ್ಯಕ್ಕಾಗಿ ಇರುವ ಸಾಧನವಾಗಬೇಕೆ ಹೊರತು ಪರಸ್ಪರ ದ್ವೇಷದ ಉಪಕರಣವಾಗಬಾರದು, ತನ್ನ ಜಾತಿ ಅಥವಾ ಧರ್ಮದವನೇ ಎಂದು ಹುಡುಕುವ ಬದಲು ಈ ಮೇಲಿನ ಗುಣಲಕ್ಷಣಗಳು ಹೊಂದಿದ್ದಾನೆಯೇ ಎಂದು ನೋಡುವುದು ಉತ್ತಮ' ಎಂಬ ಸಂದೇಶವೇ ಈ ಬರಹದ ಮೂಲ ಉದ್ದೇಶ.
* * * * *
✍ ನಿಮ್ಮ ಪ್ರೀತಿಯ
ಎಂ.ಕೆ. ಮೇತ್ರಿ, ವಕೀಲರು.
ದೂ.ಸಂ. 9739-459-677.
No comments:
Post a Comment