Thursday, October 6, 2022

ಶ್ರೀಮಂತ ರಾಷ್ಟ್ರದ ದರಿದ್ರ ಪ್ರಭುಗಳೇ, ನಿಮಗೊಂದು ಕಿವಿಮಾತು.

ಶ್ರೀಮಂತ ರಾಷ್ಟ್ರದ ದರಿದ್ರ ಪ್ರಭುಗಳೇ… ದಯವಿಟ್ಟು ಓದಿ.


ಗಾಂಧಿ ಪರಿವಾರದ ಕರುಳಿನ ಕುಡಿ, ರಾಹುಲ್… ಭಾರತ ಜೋಡಿಸುವ ನಿಟ್ಟಿನಲ್ಲಿ ಯಾತ್ರೆ ಮಾಡುತ್ತಿದ್ದಾರೆ, ಮಾಡಲಿ, ಅವರಪ್ಪ ಮಾಡಿದ ಸಾಲವನ್ನು ಮಗನೇ ತೀರಿಸಬೇಕು. 

ನಾನು ಹೀಗೆ ಹೇಳಲು ಇರುವ ಕಾರಣ ಎಲ್ಲರಿಗೂ ಗೊತ್ತಿದೆ. ಅದೇನೆಂದು ಸ್ವಲ್ಪ ಮಟ್ಟದ ಮಾಹಿತಿ ಈ ಕೆಳಗೆ ಕೊಡಲಾಗಿದೆ.


ರಾಹುಲ್ ಪ್ರತಿದಿನ ನೂರಾರು ಹಿಂದೂಗಳಿಗೆ ಭೇಟಿಯಾಗುತ್ತಾ ಇದ್ದಾರೆ, ಆದರೆ ಅದೂ ನಮ್ಮ ನಿಯತ್ತಿನ ಸಿಪಾಹಿಗಳಾದ, ತುಂಡು ಬಿದ್ದ ತಕ್ಷಣ ಬಾಲಾ ಅಲ್ಲಾಡಿಸುವವರಿಗೆ ಕಾಣುವುದೇ ಇಲ್ಲ. ಒಂದು ಮುಸ್ಲಿಮರ ಮನೆಯ ಚಿಕ್ಕ ಮಗು ಅಥವಾ ಒಬ್ಬ ಯುವತಿ ರಾಹುಲ್ ಗೆ ಭೇಟಿಯಾದರೆ ಅದೂ ರಾಷ್ಟ್ರ ಮಟ್ಟದ ಸುದ್ದಿ? ಯಾಕೆ? ಹೇಗೆ? ಯಾರು? (ಮಾಡುತ್ತಿದ್ದಾರೆ) ಒಂದು ಚಿಕ್ಕ ಅವಲೋಕನ.


  • ಮುಸ್ಲಿಮರ ಪರ ಕಾಂಗ್ರೇಸ್ ಇದೆ ಎಂದು ಬಿಂಬಿಸುವ ಉದ್ದೇಶ ಉಭಯ ಪಕ್ಷಗಳ ಅನೈತಿಕ ಕೂಟದ ಸಾಕ್ಷ್ಯ!

  • ಮುಸ್ಲಿಮರ ಮತ ಕಾಂಗ್ರೆಸ್ ಗೆ ಬಿದ್ದರೆ ಲಾಭ ಯಾರಿಗೆ ಮತ್ತು ಹೇಗೆ?

  • ಮುಸ್ಲಿಮೇತರರು ಮುಸಲ್ಮಾನರ ದ್ವೇಷದಿಂದ ಕಾಂಗ್ರೆಸ್ ನಿಂದ ದೂರ ಆಗಲಿ ಅನ್ನುವ (ಚಿಕ್ಕ) ಉದ್ದೇಶಕ್ಕಿಂತ, ಮುಸ್ಲಿಮರ ಮತಗಳು ಕಾಂಗ್ರೆಸ್ಸಿಗೆ ಮಾತ್ರ ಬೀಳಲಿ ಅನ್ನುವುದು (ಮುಖ್ಯ) ಉದ್ದೇಶ.

  • ಈ ದೇಶದಲ್ಲಿ ಕಂಡದ್ದು ಇರುವುದೇ ಇಲ್ಲ, ಇದ್ದದ್ದು ಕಾಣುವುದೇ ಇಲ್ಲ.

  • ಮುಸ್ಲಿಮರ ಮತ ಕಾಂಗ್ರೆಸ್ಸಿಗೆ ಬಿದ್ದರೆ, ಬಿಜೆಪಿ ಕಾಂಗ್ರೆಸ್ಸ್ ಎರಡೂ safe? ಅದು ಹೇಗೆ ಸಾಧ್ಯ?

  • ಮುಸಲ್ಮಾನರು ಹಾಗೂ ಇತರೇ ಶೋಷಿತ ಸಮುದಾಯಗಳು ಸ್ವಾಭಿಮಾನದ ರಾಜಕೀಯಕ್ಕೆ ಇಳಿದರೆ ಇವರಿಬ್ಬರ ಲೆಕ್ಕಾಚಾರ ಬುಡಮೇಲು ಆಗುವುದು ಖಚಿತ.

  • ಮುಸಲ್ಮಾನರು ಕಾಂಗ್ರೆಸ್ ಬಿಟ್ಟರೆ, ಅತಿ ಹೆಚ್ಚು ಹಾನಿಯಾಗುವುದು ಕಾಂಗ್ರೆಸ್ಸಿಗೆ ಅಲ್ಲವೇ ಅಲ್ಲ, ಬಿಜೆಪಿಗೆ ತುಂಬಾ ಜಾಸ್ತಿ.

  • ಅದೇರೀತಿ ಕಾಂಗ್ರೆಸ್ಸ್ ನಿಂದ ಹಿಂದುಳಿದ ಹಾಗೂ ಪರಿಶಿಷ್ಟ ಜಾತಿ ವ ಪಂಗಡದ ಓಟು ಜಾರಿ ಹೋದರೆ, ಈ ದೇಶದಲ್ಲಿ ಮೇಲ್ಜಾತಿಯ ಶ್ರೀಮಂತರ ಕಪಿ ಮುಷ್ಟಿಯಿಂದ ಭಾರತದ ಅಧಿಕಾರ ತಪ್ಪುವ ಸಾಧ್ಯತೆ ತುಂಬಾ ಜಾಸ್ತಿ ಇದೆ. 

  • ಕಾಂಗ್ರೆಸ್ ಜೀವಂತವಿಟ್ಟರೆ ಮಾತ್ರ ಅವರಿಬ್ಬರ ಆಟ ನಡೆಯೋದು.

  • ಮೇಲ್ನೋಟಕ್ಕೆ ರಾಜಕೀಯ ನೋಡುವ, ಬಾಯಿ ಚಪಲಕ್ಕೆ ರಾಜಕೀಯ ಮಾತನಾಡಿ ಮನೆಗೆ ಹೋಗಿ ಹೆಂಡತಿಯರ ಮೇಲೆ ದಬ್ಬಾಳಿಕೆ ಮಾಡುವ ರಣಹೇಡಿಗಳಿಗೆ, ಈ ಕುತಂತ್ರಿಗಳು ಮಾಡುವ ಷಡ್ಯಂತ್ರಗಳು ಅರ್ಥವಾಗಲ್ಲ.

  • ಮಿದುಳಿನಲ್ಲಿ ಮತ್ತೊಂದು ಮಿದುಳನ್ನು ಇಟ್ಟುಕೊಂಡವರನ್ನು  ಅರ್ಥಮಾಡಿಕೊಳ್ಳಲು ಆ ಮಹಾಮಹಿಮನ ಕೃಪೆ ಬೇಕು, ಎಲ್ಲರಿಗೂ ಅಂತರಾಳದ ಕಂಗಳು ತೆರೆಯುವುದಿಲ್ಲ.

  • ಮುಸಲ್ಮಾನರು, ತುಳಿತಕ್ಕೆ ಒಳಪಟ್ಟ ಹಿಂದೂ, ಕೈಸ್ತ, ಬೌದ್ಧ ಮತ್ತು ಪ.ಜಾ & ಪ. ಪಂ. ಗಳು ಕಾಂಗ್ರೆಸ್ ತ್ಯಜಿಸಿದ ಕೇವಲ ಒಂದು ವರ್ಷದಲ್ಲಿ ಈ ದೇಶದಲ್ಲಿ ಮಹಾನ್ ಅಭಿವೃದ್ದಿ ಆಗುತ್ತದೆ. ಈ ದೇಶದಲ್ಲಿ ಯಾರೂ ಬಡವರೇ ಇರುವದಿಲ್ಲ, ಬದಲಾಗಿ ಎಲ್ಲರಿಗೂ ಸಮಾನ ಅವಕಾಶಗಳು ಒಂದೇ ರೀತಿಯ ಸೌಲಭ್ಯಗಳು ಮತ್ತು ಗೌರವಯುತ ಬದುಕು ಸಿಗುತ್ತವೆ.

  • ಅದಕ್ಕೆ ಪೂರಕವಾದ ಸಂಪೂರ್ಣ ವ್ಯವಸ್ಥೆ ಬಾಬಾ ಸಾಹೇಬರು, ಕಾಂಶಿರಾಂ ಜೀ, ವಾಮನ್ ಮೇಶ್ರಾಂ ಜೀ, ನಮಗೆ ಮಾಡಿ ಕೊಟ್ಟಿದ್ದಾರೆ.

  • ಶ್ರೀಮಂತ ರಾಷ್ಟ್ರದ ದರಿದ್ರ ಪ್ರಭುಗಳೇ ದಯವಿಟ್ಟು ಅರ್ಥಮಾಡಿಕೊಳ್ಳಿ, ಮುಸಲ್ಮಾನರನ್ನು ಜೊತೆಗೆ ಇಟ್ಟುಕೊಂಡು ಮುಗಿಸಿದ ಕಾಂಗ್ರೆಸ್ಸಿನ ರೀತಿಯಲ್ಲಿ ಇತರರನ್ನು ಜೊತೆಗಿಟ್ಟುಕೊಂಡು ಮುಗಿಸುವ ಎಲ್ಲ ಕೆಲಸಗಳನ್ನೂ ಬಿಜೆಪಿ ಮಾಡುತ್ತಿದೆ.

  • ಇದನ್ನು ಅರಿಯದೆ ನೀವು ಈ ದೇಶದಲ್ಲಿ ರಾಜಕೀಯ ಮಾಡುವುದು ಅಸಾಧ್ಯ.

  • ಒಂದು ಕಾಲದಲ್ಲಿ ಜೈನ ಧರ್ಮ ಬಾಹುಳ್ಯ ಪ್ರದೇಶವಾದ ಕರುನಾಡಿನಲ್ಲಿ ಜೈನರು ಅಲ್ಪ ಸಂಖ್ಯಾತರು ಏಕೆ? ಹೇಗೆ? ಯಾರಿಂದ? ಎಲ್ಲಿ ಹೋದರು ಆಗಿನ ಜೈನರೆಲ್ಲ ಏನಾದರೂ?

  • ಬೌದ್ಧರು ಸಾವಿರಾರು ವರ್ಷ ಆಳಿದ ಸಮಸ್ತ ಭಾರತದಲ್ಲಿ ಈಗ ಬೌದ್ಧರು ಅತೀ ವಿರಳರು ಹೇಗಾಯ್ತು? ಯಾರು ಮಾಡಿದರು? ಏಕೆ ಮಾಡಿದರು? ಇದರಿಂದ ಆದ ಲಾಭ ಯಾರಿಗೆ ಸೇರಿದ್ದು?

  • ಈಗ ಅದೇ ಜನರು ಮುಸಲ್ಮಾನರನ್ನು ಏಕಾಂಗಿಯಾಗಿ ಮಾಡಿ, ತಮ್ಮಿಂದಲೇ ಶೋಷಿತವಾದ ಸಮುದಾಯಗಳನ್ನು ತಮ್ಮ ಅಡಿಯಲ್ಲೇ ಸೇರಿಸಿಕೊಂಡು ಈ ಏಕಾಂಗಿ ಸಮುದಾಯವನ್ನು ಎಲ್ಲರೂ ಸ್ವೇಶಿಸುವ ಮಟ್ಟಕ್ಕೆ ದಶಕಗಳ ಹಿಂದೆಯೇ ತಂದಿಟ್ಟಿದ್ದಾರೆ.

  • ಇದು ಕೇವಲ ಬಿಜೆಪಿಯ ಕೆಲಸವಲ್ಲ ಇದು ಕಾಂಗ್ರೆಸ್ಸಿನ ಕನಸಿನ ಕೂಸು ಅದನ್ನು ಪೌಷ್ಟಿಕ ಆಹಾರ ನೀಡಿ ಸಲುಹುತ್ತ ಇರುವುದು ಮಾತ್ರ ಬಿಜೆಪಿ.


ಈ ದೇಶದಲ್ಲಿ ಹಿಂದೂ appeasement ರಾಜಕಾರಣ ಶುರು ಮಾಡಿದ್ದು. ರಾಜೀವ್ ಸನ್ ಆಫ್ ಇಂದಿರಾ (ತಂದೆಯ ಹೆಸರು ಬರೆಯುವ ಅವಶ್ಯಕತೆ ಇಲ್ಲ, ಇದು ರಾಜಕೀಯ ವಿಚಾರ ಆಗಿರುವುದರಿಂದ, ತಾಯಿಯ ಮನೆಯ ಬಳುವಳಿ ಅತೀ ಮುಖ್ಯ), ಜನಸಂಘ ಅಥವಾ ಬಿಜೆಪಿ ಯವರು ಹಿಂದೂಗಳ ಮನಸ್ಸನ್ನು ನಾಶ ಮಾಡುವುದಕ್ಕೆ ಮೊದಲೇ ರಾಜೀವ್ ಈ ದೇಶಕ್ಕೆ ಗೋ ಮಾತೆಯನ್ನು ದೇವರಾಗಿ ಕೊಟ್ಟಿದ್ದರು. ಬಾಬರಿ ಮಸೀದಿಯನ್ನು ಕೆಡವಿ ಮಸ್ಲಿರನ್ನು ನೈತಿಕ ಹಾಗೂ ಮಾನಸಿಕ ಖಿನ್ನತೆಗೆ ಒಳಪಡಿಸುವ ಕೆಲಸ ಮಾಡಿದ್ದರು.

ಹಿಂದೂ ಅಂದರೆ ಕೇವಲ ಉತ್ತರ ಭಾರತದ ಹಾಗೂ ಉಚ್ಛಮಟ್ಟದ ಬ್ರಾಹ್ಮಣರ ನೇತೃತ್ವದಲ್ಲಿ ಇತರೆ ಜಾತಿಗಳು ಒಂದಾಗುವುದು ಎಂಬ ಪರಿಕಲ್ಪನೆಯನ್ನು ಕೊಟ್ಟಿದ್ದರು. ಇದಕ್ಕೇ ಎದೆಯೊಡ್ಡಿ ವಿರೋಧಿಸಿದ ದ್ರಾವಿಡರ ರಕ್ತದ ಓಕುಳಿ ಆಡಿದ್ದು ನಮಗೆ ನೆನಪಿದೆ. ಇದರ ವಿರುದ್ಧ ದ್ವನಿ ಎತ್ತಿದ ಸಿಖ್ಖರ ಮಾರಣಹೋಮವು ನಾವು ಮರೆತಿಲ್ಲ.


ಉತ್ತರ ಭಾರತದ ಮುಸ್ಲಿಮರು ಧರ್ಮ ನ್ಯಾಯಕ್ಕೆ ಮಿಗಿಲಾಗಿ ಅನ್ಯಾಯದ ಜೊತೆಗೆ ನಿಂತಿದ್ದ ಕಾರಣ ಅವರಿಗೆ ಅರ್ಥವಾಗದ ರೀತಿಯಲ್ಲಿ ಅವರನ್ನು ಮುಗಿಸಲಾಯಿತು, ಮುಸ್ಲಿಮರ ಪ್ರಾಬಲ್ಯವನ್ನು ಮುಗಿಸುವ ಎಲ್ಲಾ ತಂತ್ರಗಳನ್ನು ಸೃಷ್ಟಿಸಿದ್ದು, ಪ್ರಯೋಗಿಸಿದ್ದು, ಹೆಚ್ಚಿನ ಮಟ್ಟಕ್ಕೆ ಯಶಸ್ಸನ್ನು ಗಳಿಸಿದ್ದು Grand Mother & Father of ರಾಹುಲ್ ಕಾಲದಲ್ಲಿಯೇ ಎಂಬುದು ಅತೀ ಮುಖ್ಯ. ಉತ್ತರದವರು ಶ್ರೇಷ್ಠ ದಕ್ಷಿಣ ದವರು ಕನಿಷ್ಠ ಎಂಬ ಹೇಳಿಕೆ ನೀಡಿದ್ದು, ಅಮಲ್ಜಾರಿಯಲ್ಲಿ ತಂದಿದ್ದು ಕೂಡಾ ಅವರೇ ಎಂದರೆ ತಪ್ಪಲ್ಲ.


ಹಗಲು ರಾತ್ರಿ ಮುಸ್ಲಿಮರ ಶಕ್ತಿಯನ್ನು ಕ್ಷೀಣಿಸಿದ ಅವರ ತಂತ್ರ ಗಳನ್ನು ಬಳಸಲು ಬಿಜೆಪಿ ಇಂದ ಸಾಧ್ಯವಿಲ್ಲ, ಯಾಕೆಂದರೆ, ಜೊತೆಗಿದ್ದು ನಾಶಮಾಡುವುದು ಏನೆಂದು ಕಾಂಗ್ರೆಸ್ ಇತಿಹಾಸದಿಂದ ಕಲಿಯಲೇ ಬೇಕು. ಅದೇ ಸೂತ್ರವನ್ನು ಚಾಚುಕಟ್ಟಗಿ ಬಳಸಿ ಬಿಜೆಪಿಯು ಇತರೇ ಶೋಷಿತ ಸಮುದಾಯಗಳನ್ನು ವ್ಯವಸ್ಥಿತವಾಗಿ ಬಗ್ಗು ಬಡಿಯುತ್ತಿದೆ.


ಯಾವ ಹಿಂದುಳಿದ ವರ್ಗಗಳು ಬಿಜೆಪಿ ನಂಬಿಕೊಂಡು ಅಧಿಕಾರದ ಅಮಲಿನಲ್ಲಿ ತೇಲುತ್ತಾ ಇದ್ದಾರೋ, ಅವರೊಂದುದಿನ ತಮ್ಮ ಮೂಲಭೂತ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಕೈ ಚಾಚುವ ಹಿನಾಯಮಾನ ಪರಿಸ್ಥಿತಿಗೆ ಬಂದೆ ಬರುತ್ತಾರೆ.


ದಯವಿಟ್ಟು ವಿವೇಚನೆಯಿಂದ ನಿರ್ಧಾರ ಕೈಗೊಳ್ಳಿ ಶ್ರೀಮಂತ ರಾಷ್ಟ್ರದ ದರಿದ್ರ ಪ್ರಭುಗಳೇ.


#MKM

✍️ ಎಂ.ಕೆ.ಮೇತ್ರಿ,

ವಕೀಲರು. ಬೆಂಗಳೂರು.

Sunday, September 11, 2022

ಓ ಮಾಂಸಾಹಾರವೇ

 ಓ ಮಾಂಸಾಹಾರವೇ, 

ಮಡಿ ಮೈಲಿಗೆ ಕಾಣದ ಜೀವನಾಧಾರವೇ

ಸಮಾನತೆ ಮೆರೆದ ಸ್ನೇಹಾಧಾರವೆ,

ನಿನಗಿದೋ ನನ್ನ ಲೇಖನಿಯ ಉಪಹಾರ

ಮಿಶ್ರಣಗೊಳ್ಳದ ಶುದ್ಧಾಹಾರವೇ,

ಮಡಿ ಮೈಲಿಗೆ ಕಾಣದ ಜೀವನಾಧಾರವೇ,


ಅದೇನು ಮೋಹವೋ? 

ನಿನ್ನನ್ನು ಊಹಿಸಿಕೊಂಡಾಗ,

ಅದೇನು ಮಾಯೆಯೋ? 

ನಿನ್ನನ್ನು ಕೈಯಲ್ಲಿ ಹಿಡಿದಾಗ,

ರಾಜರು ಸಾಮ್ರಾಜ್ಯವೇ ಮರೆತರೋ

ಪ್ರೇಮಿಗಳು ರತಿಯನ್ನೇ ಮರೆತರೋ

ನಿನ್ನ ಪ್ರಸಾದ ಉಂಡಾಗ,

ಜನ ದೇವನನ್ನೆ ಮರೆತರೋ,

ಆ ನಿನ್ನ ಬಣ್ಣದ ಸೆಳೆತ,

ಓಹ್ ಮಸಾಲೆಗಳ ಸೊಬಗು

ಹುರಿದಾಗ ಬರುವ ನಿನ್ನ ಸುವಾಸನೆ,

ಎಣ್ಣೆಯಲ್ಲಿ ಕರೆದಾಗ ಕಂಡ ಕೋಲಾಹಲ

ತಿಳಿದವರಿಗೆ ಮಾತ್ರ ನಿನ್ನ ಬಾಯಿ ರುಚಿ

ಊಹೆಗೆ ನಿಲುಕದ ಭಾವನೆಯೇ, ನಿನ್ನಲ್ಲಿ ಎನ್ನ ಅಭಿವೃಚಿ

ನಿನ್ನ ವಾಸನೆಯು ಸೆಳೆದಾಗ ಜನಿವಾರ ಜೆಬು ಸೇರಿತು

ಉಡದಾರ ಅಡ್ಜಸ್ಟ್ ಆಯಿತು, 

ನೊಂದ ಮನಕ್ಕೆ ಹಿತವಾಗಿ ಬಂದೆ

ಸಂತಸದ ಹಬ್ಬಕ್ಕೆ ಬಲಿಯಾದ ನೀನು

ದುಃಖದ ತಿಥಿಗೂ ಆಸರೆಯಾದೆ.

ತಿನ್ನೋರು ಸದಾ ನಿನ್ನವರು,

ತಿನ್ನದೇ ಇದ್ದವರಿಗೂ ನಿನ್ನದೇ ಚಿಂತೆ, 

ನಾಟಿ ಕೋಳಿ ಸಾರಂತೆ, ಬುರ್ಲಿ ಕೌಜಗ ಮೆಲಂತೆ,

ಜಾತಿ ಭೇದ ಗಳ ಮರೆಸುವ ಚಿಕನ್ ನಿನಂತೆ, 

ಧರ್ಮಂಧರಿಗೆ ಬುದ್ಧಿ ಹೇಳುವ ಮಟನ್ ಬೇಕಂತೆ,

ಬಡವರಪಾಲಿಗೆ ಬೀಫಾದ ನೀನು

ಉಳ್ಳವರಪಾಲಿಗೆ ಮಿನಾದೇ ಯಲ್ಲವೇ?

ಮುಳ್ಳನ್ನು ಸರಿಸಿ ತಿನ್ನಿಸಿದ ಅಪ್ಪನ ನೆನಪು

ನೀರಲ್ಲಿ ತೊಳೆದು ತಿನ್ನಿಸಿದ ಅಮ್ಮನ ನೆನಪು

ನಿನ್ನೊಂದಿಗೆ ಕಳೆದ ನೂರಾರು ನೆನಪು,

ಅಟ್ಟದ ಮೇಲೆ ಅಜ್ಜಿ ನಿನ್ನ ಬಿಸಿಲಿಗೆ ಇಟ್ಟಾಗ

ಕದ್ದು ಗೆಳೆಯರೊಂದಿಗೆ ನಿನ್ನ ಸುಟ್ಟು ತಿಂದಾಗ

ಸ್ವರ್ಗದ ಕಲ್ಪನೆ ನೀಡಿದ ಆ ನಿನ್ನ ಉಪಕಾರ

ಯಾರದೋ ಮಾತಿಗೆ ಬೇಡ ನನ್ನ ಮೇಲೆ ಅಪಕಾರ

ಪಾರೆನ್ ದೆಸಾ ಸೇರಿ ಸಿರಿವಂತರ ಜೇಬು ತುಂಬಿದೆ

ಕಸಾಯಿ ಖಾನೆಯಿಂದ ಬಡವರ ಹೊಟ್ಟೆ ತುಂಬಿದೆ

ನೀನೇ ಬೇಡ ಎಂದ ಜನ ನಿನ್ನ ಪ್ರಚಾರಕ್ಕೆ ಇಳಿದಿದೆ

ಮರೆಯದಿರು ನಿನ್ನನ್ನು ನಂಬಿದ ಪ್ರೇಮಿಗಳ

ಖಾವಿ-ಖಾದಿ ಈಗ ನಿನ್ನ ಸೇವೆಗೆ ನಿಂತಿದೆ.

ಸುಕ್ಕಾ, ಚಾಪ್ಸ, ಕೀಮಾ, ಕಬಾಬು

ಕುಡಿದವರಿಗೆ ಗೊತ್ತು ನಿನ್ನ ಸೂಪೇ ಶರಾಬು

ಅನ್ನದೊಳಗಾದರೇನು?

ರೊಟ್ಟಿಯೊಂದಿಗಾದರೇನು?

ಸಕಲ ಭೋಜನದಲ್ಲಿ ನಿಂದೆ ರುಬಾಬು.

 

ನಿನ್ನೊಲವೇ ಜೀವನದ ಸಾಕ್ಷಾತ್ಕಾರ

ತಿಂದವನು ತೋರಿಸಿದ ಚಮತ್ಕಾರ

ಮಿತವಾಗಿ ತಿಂದವನು ಗಟ್ಟಿಯಾದ

ಗರಡಿಯಾಡಿ ತಿಂದವನು ಜಟ್ಟಿಯಾದ

ತಿನ್ನದೇ ಕೊರಗಿದವನು ಜುಟ್ಟು ಆದ 

ದ್ವೇಷದ ಜ್ವಾಲೆಯಲಿ ಬೆಂದು ಹೋದ.

ತಿನ್ನೋರ ಮಧ್ಯ ಜಗಳ ಹಚ್ಚಿದ

ತಿನ್ ಸೋರ ಹೊಟ್ಟೆಗೆ ಬೆಂಕಿ ಹಚ್ಚಿದ

ಅಸೂಯೆ ಯಿಂದ ಕೊರಗಿದ ಪಾಪಿ

ಹಲಾಲ್ ಒಳಗೆ ಜಟಕಾ ತಂದಿದ್ದ.

ಕರ್ಮಯೋಗಿಗಳು ಎಚ್ಚೆತ್ತಾರೋ

ಮೈಗಳ್ಳರ ಹಿಂಬದಿಗೆ ಒದೆಯುತ್ತಾರೋ

ಹಸಿರು ಕ್ರಾಂತಿಯ ಮೆರೆಯುತ್ತಾರೋ

ನಿನ್ನ ತಿಂದವರು ಚರಿತ್ರೆ ಬರೆಯುತ್ತಾರೋ

ದ್ವೇಷವ ಸೋಲಿಸಿ ಪ್ರೀತಿಯ ಸಾಮ್ರಾಜ್ಯ

ನೀಲಿ ಬಾವುಟದೀ ಕಟ್ಟುತ್ತಾರೋ.

ಜೈ ಭೀಮ್… ಜೈ ಟಿಪ್ಪೂ… ಜೈ ಡಿಎಂಎಸ್…

Thursday, September 1, 2022

ಇಸ್ಲಾಂನಲ್ಲಿ ಸ್ವಾರ್ಥಭರಿತ ಆಸೆಗಳಿಗೆ ಸ್ಥಾನವಿಲ್ಲ

ಇಸ್ಲಾಂನಲ್ಲಿ ಸ್ವಾರ್ಥಭರಿತ ಆಸೆಗಳಿಗೆ ಸ್ಥಾನವಿಲ್ಲ

✍ - ಎಂ.ಕೆ. ಮೇತ್ರಿ, ವಕೀಲರು.  

 

ಸರ್ವಶಕ್ತನು, ಸರ್ವಜ್ಞನೂ, ಸಕಲ ಲೋಕಗಳ ಸೃಷ್ಟಿಕರ್ತನು, ಸಂರಕ್ಷಕನೂ ಹಾಗೂ ಕೊನೆಗೊಂದು ದಿನ ಸಮಸ್ತ ಸೃಷ್ಟಿಯನ್ನು ನಾಶಪಡಿಸುವವನು ಅಲ್ಲದೆಯೇ ಸಕಲ ಮಾನವಜಾತಿಯ ಜೀವಾತ್ಮರನ್ನು ಮತ್ತೊಮ್ಮೆ ಜೀವಂತ ಗೊಳಿಸುವವನು! ಒಟ್ಟಿನಲ್ಲಿ ಹೇಳಬೇಕಾದರೆ ಸಮಸ್ತ ಲೋಕಗಳ ಏಕೈಕ ಒಡೆಯನಾದ ಅಲ್ಲಾಹನು ಮಾನವನ ಆತ್ಮವನ್ನು ಪರೀಕ್ಷೆಗೆ ಒಳಪಡಿಸಲೆಂದದೇ ಸ್ವಾರ್ಥವೆಂಬ ಪ್ರವೃತ್ತಿಯೊಂದಿಗೆ ಅವನನ್ನು ಸೃಷ್ಟಿಸಿದ್ದಾನೆ. ಕುರಾನ್‌ನ ನೈತಿಕ ಮೌಲ್ಯಗಳನ್ನನುದರಿಸಿ ಮಾನವನು ಜೀವಿಸದೇ ಇದ್ದರೆ ಮತ್ತು ತನ್ನ ಲೌಕಿಕ/ಐಹಿಕ ಆಸೆಗಳನ್ನು ಪಳಗಿಸಿ ಹದ್ದುಬಸ್ತಿನಲ್ಲಿ ಇಟ್ಟುಕೊಳ್ಳದೇ ಇದ್ದರೆ, ಸ್ವಾರ್ಥ ಎಂಬ ಸಾಧನವು ಮಾನವನ ಮೂಲ ಭಾವವಾಗಿ ಆತನ ಸಂಪೂರ್ಣ ಜೀವನ ಶೈಲಿಯ ನೈತಿಕ ಚೌಕಟ್ಟಿನ ಮೇಲೆ ಪ್ರಾಬಲ್ಯವನ್ನು ಸಾಧಿಸಿ, ಸರ್ವರಂಗಗಳಲ್ಲಿ ಅಂದರೇ ಅವನನ್ನು ಇಹ ಮತ್ತು ಪರದಲ್ಲಿಯೂ ಸಂಪೂರ್ಣವಾಗಿ ಮುಜುಗರಕ್ಕೆ ಈಡು ಮಾಡುತ್ತದೆ.

ಸ್ವಾರ್ಥಿಗಳು ಸಾಮಾನ್ಯವಾಗಿ ಎಲ್ಲರಿಗಿಂತ ಹೆಚ್ಚಾಗಿ ಕೇವಲ ತಮಗಾಗಿಯೇ ಮಾತ್ರ ಯೋಚಿಸುತ್ತಾರೆ. ಅವರು ಯಾವಾಗಲೂ ತಮಗಾಗಿ ಅತೀ ಉತ್ತಮವಾದುದ್ದನ್ನು ಮಾತ್ರವೇ ಬಯಸುತ್ತಾರೆ. ಸ್ವಾರ್ಥಿಯಾದವನು ಅತ್ಯುತ್ತಮವಾದ ಮತ್ತು ಪರಿಪೂರ್ಣತೆಯನ್ನು ಹೊಂದಿದ ವಸ್ತುಗಳನ್ನು ಮಾತ್ರ ತನಗಾಗಿ ಬಯಸುತ್ತಾನೆ. ಅವನು ಅತೀ ಹೆಚ್ಚಿನ ಆಸ್ತಿ, ಅಂತಸ್ತು ಮತ್ತು ಉತ್ತಮ ಮಕ್ಕಳನ್ನು ಹೊಂದಲು ಬಯಸುತ್ತಾನೆ ಅನ್ಯರ ಆಸ್ತಿ, ಅಂತಸ್ತನ್ನು ಕಂಡು ಒಳಗೊಳಗೇ ಮರಗುವದಲ್ಲದೆ ಅವರ ಹಾನಿಗಾಗಿ ಹಾತೊರೆಯುತ್ತಿರುತ್ತಾನೆ. ಅದಲ್ಲದೇ ತಾನು ಮತ್ತು ತನ್ನ ಸ್ವಂತ ಕುಟುಂಬ ಮಾತ್ರ ಆರಾಮದಾಯಕವಾಗಿರಲು ಬಯಸುತ್ತಾನೆ. ತೊಂದರೆಗಳು ಎದುರಾದಾಗ, ಅವನ ಸುತ್ತಲಿನ ಜನರು ತನಗಾಗಿ ಎಲ್ಲ ರೀತಿಯ ಅಪಾಯಗಳು ಮತ್ತು ಹಾನಿಗಳನ್ನು ಅನುಭವಿಸಲಿ ಎಂದೂ ಬಯಸುತ್ತಾನೆ ಮತ್ತು ಅನ್ಯರು ಅವನಿಗಾಗಿ ತಮ್ಮ ತಮ್ಮ ಸ್ವ-ಹಿತಾಸಕ್ತಿಗಳನ್ನು ಬದಿಗಿಟ್ಟು ತನ್ನನ್ನು ರಕ್ಷಿಸಲಿ ಎಂದು ಆಶಿಸುತ್ತೇನೆ, ಎಲ್ಲಾ ಕಠಿಣ ಪರಿಸ್ಥಿತಿಯಲ್ಲಿಯೂ ತನ್ನನ್ನೇ ಬೆಂಬಲಿಸಲಿ ಎಂದು ನಿರೀಕ್ಷಿಸುತ್ತಾನೆ. ಅವನು ತನ್ನ ಆಸೆ-ಆಕಾಂಕ್ಷೆಗಳನ್ನು ಮತ್ತು ಹಿತಾಸಕ್ತಿಯನ್ನು ರಕ್ಷಿಸಲು ಮತ್ತು ತನ್ನದೇ ಆದ ಸೌಲಭ್ಯ ಮತ್ತು ಸೌಕರ್ಯಗಳ ರಕ್ಷಣಗೋಸ್ಕರ ಸದಾಕಾಲ ಪ್ರಯತ್ನಿಸುತ್ತಾನೆ.

ಪರಿಸ್ಥಿತಿಯು ವಿಭಿನ್ನವಾದಾಗ ಅಥವಾ ತನ್ನ ನಿಯಂತ್ರಣದಿಂದ ದಾಟಿ ಅತಿರೇಕಕ್ಕೆಹೋದಾಗ ಅವನು ತನ್ನ ಸ್ವಂತ ಹಿತಾಸಕ್ತಿಗಳನ್ನು ಮಾತ್ರ ರಕ್ಷಿಸುವ ಉದ್ದೇಶದಿಂದ ಮತ್ತು ತನ್ನ ಕಡೆಗೆ ಬರುವ ಯಾವುದೇ ಅನಿರೀಕ್ಷಿತ ಹಾನಿಯನ್ನು ತಡೆಗಟ್ಟುವ ಸಲುವಾಗಿ, ಸ್ವಾರ್ಥಿಯು ಆ ಹಾನಿಯನ್ನು ಮತ್ತೊಬ್ಬರಕಡೆಗೆ ತಿರುಗಿಸಲೂ ಸಹಿತ, ಹಿಂದೆ ಜರಿಯಲಾರನು, ಸ್ವ-ರಕ್ಷಣೆಯ ನಿಟ್ಟಿನಲ್ಲಿ ತನ್ನ ಮೌಲ್ಯಯುತವಾದ ಅಥವಾ ಅಮೂಲ್ಯವಾದ ವಸ್ತುಗಳನ್ನು, ಸ್ಥಿರ/ಚರ ಆಸ್ತಿಗಳನ್ನು ಅಥವಾ ಅವಶ್ಯವೆನಿಸಿದರೆ ತನ್ನವರನ್ನೂ ಕೂಡ ಬಲಿಕೊಡಲು ಸಿದ್ಧನಾಗಿರುತ್ತಾನೆ. ಮಾನವನ ಭಾವೋದ್ರಿಕ್ತ ಲೌಕಿಕ ಬಯಕೆಗಳಲ್ಲಿ ಈ ಸ್ವಾರ್ಥ ಎಂಬ ಐಹಿಕ ಭಾವನೆಯನ್ನು ಅಲ್ಲಾಹನು ಕುರಾನ್‌ನಲ್ಲಿ ಈ ಕೆಳಗಿನಂತೆ ಬಹಿರಂಗಪಡಿಸಿದ್ದಾನೆ: "ವಾಸ್ತವವಾಗಿಯೂ, ಮನುಷ್ಯನು ಸಹನೆ/ತಾಳ್ಮೆ ಇಲ್ಲದವನಾಗಿ ರಚಿಸಲ್ಪಟ್ಟಿದ್ದಾನೆ - ಕೆಟ್ಟ ಸಂಗತಿಗಳು ಸಂಭವಿಸಿದಾಗ ಹತಾಶನಾಗಿ ಸಂಕಟಪಡುತ್ತಾನೆ, ಒಳ್ಳೆಯದು ಬಂದಾಗ ತಡೆ ಹಿಡಿಯುತ್ತಾನೆ/(ಜಿಪುಣ ನಾಗುತ್ತನೆ)." (ಕುರಾನ್, 70:19-21)

ಆಧುನಿಕ ಸಮಾಜದ ಅತೀದೊಡ್ಡ ಅಪಾಯವೆಂದರೆ ಸ್ವಾರ್ಥವೇ ಆಗಿದೆ. ಧಾರ್ಮಿಕ ಮತ್ತು ನೈತಿಕ ಮೌಲ್ಯಗಳಿಂದ ದೂರವಾಗಿ ಬದುಕುವ ಆಧುನಿಕ ಸಮಾಜದಲ್ಲಿ ವ್ಯಾಪಕವಾಗಿ ಹರಡಿರುವ ಭೌತಿಕವಾದಿ ಮತ್ತು ಲೌಕಿಕವಾದಿ ಚಿಂತನೆಯು ಮಾನವ ಸ್ವಭಾವದಲ್ಲಿ ಸ್ವಾರ್ಥ ಮತ್ತು ಅಹಂಕಾರದ ಮನೋಭಾವವನ್ನು ಬಲಪಡಿಸುತ್ತದೆ "ನಾನು-ಮೊದಲು" & "ನನಗೆ-ಮೊದಲು" ಎಂಬ ಅನೈತಿಕತೆಯನ್ನೇ ನ್ಯಾಯಸಮ್ಮತವಾದ ತಾತ್ವಿಕತೆ ಎಂಬಂತೆ ಪ್ರಚಾರ ವ ಪ್ರಸಾರ ಮಾಡುತ್ತಿರುತ್ತಾನೆ ಮೋಸಗಾರಿಕೆಯನ್ನ ಕಲೆ ಎಂಬಂತೆಯೂ ದ್ರೋಹವನ್ನು ಕೌಶಲ್ಯವೆಂಬಂತೆಯೂ ಬಿಂಬಿಸುತ್ತಾನೆ . ವಾಸ್ತವವಾಗಿ, "ನಾನು ಚೆನ್ನಾಗಿ ಇರುವವರೆಗೆ, ಬೇರೆಯಾರಿಗೆ ಏನಾದ್ರೆ ನನಗೇನು?" ಅಥವಾ "ನಾನೇ ಗೆಲ್ಲಬೇಕು / ನಾನು ಮಾತ್ರ ಸಾಧಿಸಬೇಕು / ಮೊದಲನೇ ಸ್ಥಾನದಲ್ಲಿ ನಾನೇ ಇರಬೇಕು/ " ಎಂದು ಎದುರು ನೋಡುತ್ತಿರುವ ಜನ ಸಾಮಾನ್ಯವಾಗಿ ಅಂತಹ ಸ್ವಾರ್ಥಿಗಳ ಸಮಾಜಕ್ಕೆ ಸೂಕ್ತವಾಗಿ ಪ್ರತಿನಿಧಿಸುತ್ತಾರೆ.

ಹೀಗಾಗಿ ದೀನರು, ದಲಿತರು, ಶೋಷಿತರು, ಪೀಡಿತರು, ಶಿಕ್ಷಣದಿಂದ ವಂಚಿತರೂ ಮತ್ತು ತುಳಿತಕ್ಕೊಳಗಾದ ಬಡ ಜನರು; ವಿಶೇಷವಾಗಿ ಇಂತಹ ಸಮುದಾಯಗಳ ಮಹಿಳೆಯರು, ವಿದುವೆಯರು ಮತ್ತು ಅವರ ಅನಾಥ ಮಕ್ಕಳು ಮೂಲಭೂತ ಅವಶ್ಯಕತೆಗಳಾದ ಶಿಕ್ಷಣ ಮತ್ತು ಆಹಾರವಿಲ್ಲದೆ ಬಳಲುತ್ತಿದ್ದಾರೆ; ಅಂತಹ ಜನರ ಮೇಲೆ ಈ ಸ್ವಾರ್ಥಿಗಳು ಕಿಂಚಿತ್ತೂ ಕರುಣೆಯನ್ನು ತೋರುವುದಿಲ್ಲ ಅವರ ಬಗ್ಗೆ ತಿಳಿದುಕೊಳ್ಳುವ ಕನಿಷ್ಠಮಟ್ಟದ ಆಸಕ್ತಿಯೂ ಅವರಿಗೆ ಇರುವುದಿಲ್ಲ. ವರ್ಣ, ಜಾತಿ, ಸಂಪತ್ತು ಮತ್ತು ಕರ್ಮದ ಆಧಾರದ ಮೇಲೆ ಹಂಚಲಾದ ಈ ಸಾಮಾಜಿಕ ರಚನೆಯು ಸಾಮಾನ್ಯವಾಗಿ ಕೆಳ ಸಮುದಾಯಗಳ ತೊಂದರೆಗಳಿಗೆ ಮತ್ತು ಅವರಲ್ಲಿ ಒಂದು ಅತೃಪ್ತಕರ ವಾತಾವರಣದ ಸೃಷ್ಠಿಗೆ ಕಾರಣವಾಗುತ್ತದೆ, ಇಂತಹ ಜನರು ರೊಚ್ಚಿಗೆದ್ದು ಕ್ರಾಂತಿಗೆ ಅಣಿಯಾದಾಗ ಇದೆ ಸ್ವಾರ್ಥಿಗಳು ಅವರನ್ನು ಸಮಾಜ ವಿರೋಧಿ, ರಾಷ್ಟ್ರ ವಿರೋಧಿ ಅಥವಾ ಇನ್ನೂ ಬೇರೆ ಬೇರೆ ಹೆಸರು ಗಳಿಂದ ಗುರುತಿಸಿ ಅವರ ಮೇಲೆ ಶಸ್ತ್ರಾಸ್ತ್ರ ಕಾರ್ಯಾಚರಣೆಯನ್ನು ಮಾಡಲು ರಾಜಕೀಯ, ಆರ್ಥಿಕ ಮತ್ತು ತಮ್ಮ ಇತರೆ ಎಲ್ಲ ಶಕ್ತಿಗಳನ್ನು ದುರುಪಯೋಗ ಮಾಡಿಕೊಂಡು ಶೋಷಿತರಿಗೆ ಇನ್ನಷ್ಟು ಶೋಷಣೆಯನ್ನೇ ಮಾಡುತ್ತಾರೆ. ಇದಕ್ಕೆ ಕೊನೆ ಯಾವಾಗ?.

ಕುರಾನ್‌ನಲ್ಲಿ ತೋರಿದ ನೈತಿಕ ಮೌಲ್ಯಗಳನ್ನಾಧರಿಸಿ ಬದುಕುವ ಜನರು ತಮ್ಮ ಸರ್ವಸ್ವವನ್ನೂ ದೈವ ಕೃಪೆಗಾಗಿ ಮೀಸಲು ಇಟ್ಟು ಹೋರಾಡುತ್ತಾರೆ, ಯಾವುದೇ ಸ್ವಯಂ ಲಾಭಕ್ಕೆ ಮಾರುಹೋಗಲಾರರು, ಅಂತಹ ದೈವ ಪ್ರೇಮ ಹಾಗೂ ಭಕ್ತಿ ಉಳ್ಳವರು ಮಾತ್ರ ಇಂತಹ ಕಲುಷಿತ ಸಮಾಜದಲ್ಲಿ ಯಾವುದೇ ರೀತಿಯ ಬದಲಾವಣೆಯನ್ನು ತರಲು ಆಸಕ್ತರು ಮತ್ತು ಸಮರ್ಥರು ಆಗಿರುತ್ತಾರೆ, ಅವರಲ್ಲಿ ದೈವ ಭಯ, ಭಕ್ತಿ ಹಾಗೂ ಪ್ರಾಮಾಣಿಕತೆ ಇರುವುದರಿಂದ ಅವರು ಯಾರಿಗೂ ಅನ್ಯಾಯ ಮಾಡಲಾರರು, ಇನ್ನೊಬ್ಬರ ಮೂಲ ಅಧಿಕಾರ ಹಾಗೂ ಯಾವುದೇ ರೀತಿಯ ಹಕ್ಕುಗಳಿಗೆ ಚ್ಯುತಿಯನ್ನು ತರದೇ ಸುಗಮವಾದ ರೀತಿಯಲ್ಲಿ ಸಾಮಾಜಿಕ ಸಮಾನತೆಯನ್ನೂ, ಅರ್ಥಪೂರ್ಣವಾದ ನ್ಯಾಯಪ್ರಕ್ರಿಯೆಯನ್ನೂ ಪ್ರತಿಷ್ಟಾಪಿಸುವವರು; ಕುರಾನ್ ಅನುಯಾಯಿಗಳು ಮಾತ್ರ ಹದಗೆಟ್ಟುಹೋದ ಸಮಾಜವನ್ನು ಸ್ವಚ್ಚಗೊಳಿಸುವ ಹಾಗೂ ಸ್ವಾರ್ಥಭರಿತ ಹಿತಾಸಕ್ತಿಯುಳ್ಳ ಜನರನ್ನು ಅಧಿಕಾರದಿಂದ ಕೆಳಗಿಳಿಸಿ ಸಾಮಾಜಿಕ ಮೌಲ್ಯಗಳನ್ನು ಮರು ಪ್ರತಿಷ್ಠಾಪಿಸುವ, ಜನಸಾಮಾನ್ಯರ ಮನಸ್ಸುಗಳನ್ನು ಬದಲಾಯಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ. "ಯಾರು ಕೇವಲ ತಮ್ಮ ಸ್ವ-ಹಿತಾಸಕ್ತಿಗಳನ್ನು ರಕ್ಷಿಸುವವರೋ ಮತ್ತು ಅನ್ಯರ ಹಕ್ಕು ಉಲ್ಲಂಘಿಸುತ್ತಾರೆಯೋ; ಮತ್ತು ಯಾರು ಅಲ್ಲಾಹನ ಕುರಿತು ಪ್ರೀತಿ ಅಥವಾ ಭಯವನ್ನು ಹೊಂದಿರುವುದಿಲ್ಲವೋ ಅವರನ್ನು ನಿಗ್ರಹಿಸುವುದು ಹಾಗೂ ಅವರು ತಮ್ಮ ಸ್ವಂತ ಹಿತಾಸಕ್ತಿಗಳ ಅನುಸರಣೆಯಲ್ಲಿ ಸಮಾಜಕ್ಕೆ ಹಾಗೂ ಮಾನವ ಜಾತಿಗೆ ತೊಂದರೆಯನ್ನುಂಟುಮಾಡುವ ಪ್ರತಿಯೊಂದು ಕಾರ್ಯಗಳನ್ನು ತಡೆಹಿಡಿದು ನಿಶಕ್ತ ಹಾಗೂ ಮುಗ್ಧ ಜನರನ್ನು ಅಂತಹ ಶೋಷಕರಿಂದ ರಕ್ಷಣೆ ಮಾಡುವುದು ಕೂಡ ನಿಜವಾದ ದೈವಭಕ್ತರ ಸಾಮಾಜಿಕ ಜವಾಬ್ದಾರಿಯಾಗಿದೆ.

ಇಸ್ಲಾಂ ಧರ್ಮವು ಸಮಾಜದ ಪ್ರತಿಯೊಂದು ರಂಗದಲ್ಲಿ ಅಲ್ಲಾಹನ ಕುರಿತು ಪ್ರೇಮ ಮತ್ತು ಭಕ್ತಿಪೂರ್ವಕವಾದ ಭಯವನ್ನು ಬೆಳೆಸುತ್ತದೆ ಮತ್ತು ಕುರಾನ್‌ನ ನೈತಿಕ ಮೌಲ್ಯಗಳ ಮೂಲದಲ್ಲಿ ಅಡಗಿರುವ "ಸಹಾನುಭೂತಿ" ಮತ್ತು "ಪರಸ್ಪರ ಸಹಾಯ"ದಂತಹ ಉತ್ತಮ ನೈತಿಕ ಮೌಲ್ಯಗಳನ್ನು ಪಡೆದುಕೊಳ್ಳುವ ಏಕೈಕ ಮಾರ್ಗವೇ ಅಲ್ಲಾಹನೊಂದಿಗೆ ಹೊಂದುವ ನಿಸ್ವಾರ್ಥ ಪ್ರೇಮವಾಗಿದೆ.

ಅಲ್ಲಾಹನ ಭಯ ಮತ್ತು ಪ್ರೀತಿಯು ಜನರು ತಮ್ಮನ್ನು ತಾವು ಆತನಿಗೆ ಸಂಪೂರ್ಣವಾಗಿ ಶರಣಾಗಿಸಲು ಅಥವಾ ಮಹಾಮಹಿಮ ದೇವನನ್ನು ಒಪ್ಪಿಕೊಳ್ಳಲು ಹಾಗೂ ಕೇವಲ ಉತ್ತಮವಾದದ್ದನ್ನು ಮಾತ್ರ ಆಯ್ಕೆ ಮಾಡಿಕೊಂಡು ಅನುಸರಿಸಲು ಮತ್ತು ಸೃಷ್ಟಿಯ ಎಲ್ಲಾ ಚರಾಚರಗಳ ಕುರಿತು ಸಹಾನುಭೂತಿಯನ್ನು ಹೊಂದಲು ಅನುವು ಮಾಡಿಕೊಡುತ್ತದೆ. ತನ್ನ ಪವಿತ್ರ ವಾಕ್ಯಗಳಲ್ಲಿ ಅಲ್ಲಾಹನು ಸತ್ಯವಿಶ್ವಾಸಿಗಳ ಕುರಿತು ಕಾಳಜಿಯುಕ್ತ ತನ್ನ ವಿಶೇಷ ಆಸಕ್ತಿಯನ್ನೂ ಹಾಗೂ ತನ್ನ ಅನುಮೋದನೆಯನ್ನು ಹೀಗೆ ಅನಾವರಣಗೊಳಿಸುತ್ತಾನೆ: “ಅವರು (ಇಹಲೋಕದಲ್ಲಿ) ತಮ್ಮ ಪ್ರತಿಜ್ಞೆಗಳನ್ನು ಪೂರೈಸುತ್ತಾರೆ ಮತ್ತು ತನ್ನ ವಿಕೋಪವನ್ನು/ದುಷ್ಟತನವು ದೂರದವರೆಗೆ ಹರಡುವ (ಆ) ದಿನಕ್ಕೆ ಭಯಪಡುತ್ತಾರೆ. ಅವರು ತಮಗೆ ತುಂಬಾ ಇಷ್ಟವಾದ ಆಹಾರವನ್ನು ಕೂಡ ಬಡವರಿಗೆ, ಅನಾಥರಿಗೆ ಮತ್ತು (ತಮ್ಮ ಅಡಿಯಲ್ಲಿ) ಬಂಧಿತರಿಗೆ ಆಹಾರವನ್ನು ಕೊಡುತ್ತಾರೆ, (ತಮ್ಮ ಮನಸ್ಸಿನಲ್ಲಿ ಹೀಗೆ ಅಂದುಕೊಳ್ಳುತ್ತಾರೆ) ‘ನಾವು ಅಲ್ಲಾಹನ ಪ್ರಸನ್ನತೆಯನ್ನ ಪಡೆಯುವ ಬಯಕೆಯಿಂದ ಮಾತ್ರ ನಿಮಗೆ ಆಹಾರವನ್ನು ನೀಡುತ್ತೇವೆ. ನಿಮ್ಮಿಂದ ಯಾವುದೇ ಪ್ರತಿಫಲ ಅಥವಾ ಯಾವುದೇ ರೀತಿಯ ಧನ್ಯವಾದಗಳನ್ನು ನಾವು ಬಯಸುವುದಿಲ್ಲ. ನಿಜವಾಗಿಯೂ ನಮಗೆ ನಮ್ಮ ಸಂರಕ್ಷಕನ, ಹಾಗೂ ಪ್ರಜ್ವಲಿಸುವ ವಿಪತ್ತಿನ ಆ ಘೋರವಾದ ದಿನದ ಭಯವಿದೆ.’ ಆದ್ದರಿಂದ ಅಲ್ಲಾಹನು ಅವರನ್ನು ಆ ದಿನದ ವಿಪತ್ತಿನಿಂದ ರಕ್ಷಿಸಿದ್ದಾನೆ ಮತ್ತು ಪ್ರಕಾಶಮಾನವಾದ ಮತ್ತು ಪರಿಶುದ್ಧ ಸಂತೋಷವನ್ನು ಅವರಿಗಾಗಿ ದಯಪಾಲಿಸಿದನು. (ಕುರಾನ್, 76:7-11)

ಪವಿತ್ರ ಪ್ರವಾದಿ (ಸ) ಹೇಳಿದರು: "ತನ್ನ ನೆರೆಹೊರೆಯವರು ಹಸಿದಿರುವಾಗ ಹೊಟ್ಟೆ ತುಂಬಿ ಮಲಗುವವನು ನಮ್ಮಲ್ಲಿ ಒಬ್ಬನಲ್ಲ." ಅಲ್ಲಾಹನ ಸಮ್ಮತಿಯನ್ನು ಪಡೆಯಲು ಬಯಸುವ ಎಲ್ಲಾ ವಿಶ್ವಾಸಿಗಳಿಗೆ ಇದು ಅತೀ ಪ್ರಮುಖ ಎಚ್ಚರಿಕೆಯಾಗಿದೆ. ಆದ್ದರಿಂದ, ಅಲ್ಲಾಹನ ಕೃಪೆಯನ್ನು ಗಳಿಸುವ ಉದ್ದೇಶವನ್ನು ಹೊಂದಿರುವ ಯಾರೇ ಆದರೂ ಕೇವಲ ತಮ್ಮ ಸ್ವಂತ ಸಮಸ್ಯೆಗಳಿಗೆ ಪರಿಹಾರವನ್ನು ಹುಡುಕುವದಿಲ್ಲ; ಬದಲಾಗಿ ತಮ್ಮ ಸುತ್ತಲಿರುವ ಅಗತ್ಯತೆ ಹೊಂದಿರುವ ಇತರರ ಸಮಸ್ಯೆಗಳನ್ನು ಪರಿಹರಿಸುವ ಜವಾಬ್ದಾರಿಯನ್ನು ಸಹ ಅವರು ವಹಿಸಿಕೊಳ್ಳುತ್ತಾರೆ.

ಜನರು ತಾವು ಇಷ್ಟಪಡುವ ವಸ್ತುಗಳನ್ನು ತ್ಯಜಿಸಲು ಅಥವಾ ತಮ್ಮ ಸ್ವಂ ಸೌಕರ್ಯವನ್ನು, ಸುಖ-ಸಂಪತ್ತನ್ನು ತ್ಯಾಗ ಮಾಡುವ ಅವಶ್ಯಕತೆಯೂ ಖಂಡಿತವಾಗಿಯೂ ಇದ್ದೇಇದೆ. ಬಡವರನ್ನು ರಕ್ಷಿಸುವಲ್ಲಿ ಮತ್ತು ಅವರ ಅಗತ್ಯತೆಗಳನ್ನು ಕುರಿತು ವೀಕ್ಷಿಸುವಲ್ಲಿ ಮುಸ್ಲಿಮರು ನೋಡುವ ಶೈಲಿ ಹೆಗಿರುವುದೆಂದರೆ, ಕಷ್ಟದಲ್ಲಿರುವ ಜನರ ಸಾಲಗಳನ್ನು ತಾವು ಭರಿಸುತ್ತಾರೆ ಈ ಮೂಲಕ ತಮ್ಮ ಆಸ್ತಿಯನ್ನು ಸಂಗ್ರಹಿಸುವ ಬದಲು ಅಲ್ಲಾಹನ ಮಾರ್ಗದಲ್ಲಿ ಖರ್ಚು ಮಾಡುವ ಮೂಲಕ ಪವಿತ್ರ ಕುರಾನಿನಲ್ಲಿ ಹೇಳಲಾದ ನೈತಿಕ ಮೌಲ್ಯಗಳು ಶ್ರೇಷ್ಠ ಗುಣಗಳನ್ನು ತಮ್ಮ ವ್ಯಕ್ತಿತ್ವದಲ್ಲಿ ರೂಡಿಗತ ಮಾಡಿಕೊಳ್ಳುತ್ತಾರೆ.

ಜನರ ಅಗತ್ಯಗಳಿಗೆ ಸ್ಪಂದಿಸುವುದು, ಅವರ ಬೇಕು ಬೇಡಗಳಿಗೆ ಪ್ರತಿಕ್ರಿಯಿಸುವುದು, ಅವರನ್ನು ಕುರಿತು ದಯೆಯಿಂದ ನಡೆದುಕೊಳ್ಳುವುದು... ಇವೆಲ್ಲವೂ ಕೂಡ ಆತ್ಮಸಾಕ್ಷಿಯ ಕ್ಷೀಣತೆಯನ್ನು ತಡೆಯುವ ಮಾನವ-ನಡವಳಿಕೆಯ ಮೂಲಸೂತ್ರಗಳಾಗಿವೆ. ಇತರರೊಂದಿಗೆ ಸಹಾನುಭೂತಿ, ನಿರ್ಗತಿಕರನ್ನು ಪ್ರೀತಿಸುವುದರಿಂದ ಮತ್ತು ಗೌರವಿಸುವುದರಿಂದ ನಮ್ಮಲ್ಲಿರುವ ಕ್ರೌರ್ಯ, ತಾತ್ಸಾರ ಮನೋಭಾವ ಮತ್ತು ಸ್ವಾರ್ಥವನ್ನು ತೊಡೆದುಹಾಕಲು ಸಾಧ್ಯವಾಗುತ್ತದೆ. ಪವಿತ್ರ ಕುರಾನಿನ ಶ್ಲೋಕಗಳು ಬಹಿರಂಗಪಡಿಸುವ ಪ್ರಕಾರ ನಮ್ಮ ಉತ್ತಮ ನಡವಳಿಕೆಯ ಪ್ರತಿಫಲವು ಅಲ್ಲಾಹನ ಸನಿಹದಲ್ಲಿ ಮಾತ್ರ ಬರುತ್ತದೆ: “ಅಲ್ಲಾಹನನ್ನು ಆರಾಧಿಸಿ ಮತ್ತು ಅವನೊಂದಿಗೆ ಏನನ್ನೂ(ಯಾರನ್ನೂ) ಸಂಯೋಜಿಸಬೇಡಿ. ನಿಮ್ಮ ಹೆತ್ತವರಿಗೆ, ಸಂಬಂಧಿಕರಿಗೆ, ಅನಾಥರಿಗೆ, ಬಡವರಿಗೆ, ಮತ್ತು ನಿಮಗೆ ಸಂಬಂಧಿಸಿರುವ ನೆರೆಹೊರೆಯವರಿಗೆ ಮತ್ತು ನಿಮಗೆ ಸಂಬಂಧವಿಲ್ಲದ ನೆರೆಹೊರೆಯವರಿಗೆ ಮತ್ತು ಸಹಚರರಿಗೆ ಮತ್ತು ಪ್ರಯಾಣಿಕರಿಗೆ ಮತ್ತು ನಿಮ್ಮ ಗುಲಾಮರಿಗೆ ಒಳ್ಳೆಯವರಾಗಿರಿ/ಉಪಕಾರಮಾಡಿರಿ. ನಿಸಂಶಯವಾಗಿ ಜಂಬ ಕೊಚ್ಚಿಕೊಳ್ಳುವವರನ್ನು ಮತ್ತು ಆಹಂಕಾರಿಗಳನ್ನು ಅಲ್ಲಾಹನು ಪ್ರೀತಿಸುವುದಿಲ್ಲ." (ಕುರಾನ್, 4:36)

ಸತ್ಯವಿಶ್ವಾಸವು ಜನರ ನಡವಳಿಕೆಯನ್ನು ಪರಿಪೂರ್ಣಗೊಳಿಸುತ್ತದೆ, ಅದು ಇನ್ನೂ ಹತ್ತು-ಹಲವು ಗುಣಲಕ್ಷಣಗಳನ್ನು ತಯಾರುಮಾಡುತ್ತದೆ. ಧಾರ್ಮಿಕ ನೈತಿಕ ಮೌಲ್ಯಗಳಿಗೆ ಅಗತ್ಯವಿರುವಂತೆ ತಮ್ಮ ಆತ್ಮಸಾಕ್ಷಿಯನ್ನು ನಿರಂತರವಾಗಿ ಅನುಸರಿಸುವ ಜನರು ಯಾವಾಗಲೂ ಅತ್ಯುತ್ತಮ, ಅತ್ಯಂತ ಪರಿಗಣನೆಗೆ ಪಾತ್ರವಾದ ರೀತಿಯಲ್ಲಿ ವರ್ತಿಸುತ್ತಾರೆ, ಅವರು ವ್ಯಕ್ತಿತ್ವವು ವಿಶ್ವಸನೀಯ, ಸ್ಫೂರ್ತಿದಾಯಕ ಹಾಗೂ ಸಹಿಷ್ಣುತಾಪೂರ್ಣ ಆಗಿರುತ್ತದೆ.

ಈ ನೈತಿಕ ಗುಣಗಳನ್ನು ಹೊಂದಿರುವ ವ್ಯಕ್ತಿ ಯಾರೇ ಆಗಲಿ ಇಹಲೋಕದಲ್ಲಿ ಸರ್ವರ ಪ್ರೀತಿಗೆ ಪಾತ್ರನಾಗುವದಲ್ಲದೆ ತನ್ನ ಮುಂದಿನ ಜೀವನಕ್ಕಾಗಿ (ಪರಲೋಕದಲ್ಲಿ) ಬೇಕಾಗಿರುವ ಎಲ್ಲ ಅರ್ಹತೆನಗಳನ್ನೂ ಗಳಿಸಿಕೊಂಡಿದ್ದಾನೆ ಎಂದರ್ಥ. ಈ ಪ್ರಪಂಚವನ್ನು ಸ್ವ-ಆಸಕ್ತಿ ಮತ್ತು ಸ್ವಾರ್ಥವೆಂಬ ಅನವಶ್ಯಕ ಭಾವಗಳಿಂದ ಮುಕ್ತಗೊಳಿಸಲು ಮತ್ತು ಮಾನವ ಕೇಂದ್ರಿತ ಪ್ರಪಂಚವನ್ನು ತಯಾರುಮಾಡುವಲ್ಲಿ ಅವನು ಪ್ರಮುಖ ಪಾತ್ರ ವಹಿಸಲಿದ್ದಾನೆ. ಇಲ್ಲಿ ಅತೀ ಪ್ರಮುಖವಾಗಿ ನಾವು ಪರಿಗಣಿಸಬೇಕಾದಅಂಶಗಳೆಂದರೆ, ಇಸ್ಲಾಂನಲ್ಲಿ ಪ್ರತಿಯೊಬ್ಬ ವ್ಯಕ್ತಿಯ ಘನತೆ, ಗೌರವ ಮತ್ತು ಸಾಮಾಜಿಕ ಸ್ಥಾನಮಾನವೆಲ್ಲವೂ ಆತನ ನಂಬಿಕೆ, ನಡವಳಿಕೆ ಮತ್ತು ಕಾರ್ಯಪ್ರವೃತ್ತಿಯಲ್ಲಿ ಅಡಗಿದೆಯೆ ಹೊರತು ಅವನ ಜನ್ಮಸ್ಥಾನ, ಕುಲ, ಗೋತ್ರ, ಲಿಂಗ ಋಷಿಮೂಲ ಅಥವಾ ಜಾತಿ-ವರ್ಣದಲ್ಲಿ ಅಡಗಿಲ್ಲ. ಸ್ವಾರ್ಥವೂ ಒಂದೇ ರೀತಿಯಲ್ಲಿ ಇರುವದಿಲ್ಲ ಸಂದರ್ಭ ಸನ್ನಿವೇಶಕ್ಕೆ ತಕ್ಕಂತೆ ರನ್ನ ಪರೀಧಿ ಮತ್ತು ಸ್ವರೂಪವನ್ನು ಬದಲಿಸುತ್ತಲೇ ಇರುತ್ತದೆ. ಒಡಹುಟ್ಟಿದವರ ಮಧ್ಯ ಬಂದಾಗ ತನ್ನ ಮಡದಿ ಮಕ್ಕಳಿಗೆ ಪರವಹಿಸುತ್ತದೆ, ಅದೇ ಮಡದಿಯ ವಿರುದ್ಧ ಬಂದಾಗ ತನ್ನ ಅಹಂ ಮಾತ್ರ ಬಯಸುತ್ತದೆ, ದಾಯಾದಿಗಳ ಮಧ್ಯ ಇರಿಸುಮುರಿಸು ಆದಾಗ ಒಡಹುಟ್ಟಿದವರು ನನ್ನವರು ಎನ್ನುತ್ತೆ, ಪರಸ್ಥಳದಲ್ಲಿ ಸಿಕ್ಕ ತನ್ನೂರವ್ಯಕ್ತಿ ನನ್ನವನು ಅನಿಸುತ್ತೆ, ಅವನ ಜಾತಿ-ಧರ್ಮ ನನದಲ್ಲ ಎಂದಾಗ ದೂರತಳ್ಳುತ್ತೆ. 'ಧರ್ಮವೆನ್ನುವುದು ಮಹಾಮಹಿಮ ದೇವನಾದ ಅಲ್ಲಾಹನ ಸಾಮಿಪ್ಯಕ್ಕಾಗಿ ಇರುವ ಸಾಧನವಾಗಬೇಕೆ ಹೊರತು ಪರಸ್ಪರ ದ್ವೇಷದ ಉಪಕರಣವಾಗಬಾರದು, ತನ್ನ ಜಾತಿ ಅಥವಾ ಧರ್ಮದವನೇ ಎಂದು ಹುಡುಕುವ ಬದಲು ಈ ಮೇಲಿನ ಗುಣಲಕ್ಷಣಗಳು ಹೊಂದಿದ್ದಾನೆಯೇ ಎಂದು ನೋಡುವುದು ಉತ್ತಮ' ಎಂಬ ಸಂದೇಶವೇ ಈ ಬರಹದ ಮೂಲ ಉದ್ದೇಶ.

* * * * *

✍ ನಿಮ್ಮ ಪ್ರೀತಿಯ

ಎಂ.ಕೆ. ಮೇತ್ರಿ, ವಕೀಲರು.

ದೂ.ಸಂ. 9739-459-677.

Tuesday, August 16, 2022

'ಮುಹರಮ್' ಅಥವಾ 'ಮುಹರಂ-ಉಲ್-ಹರಂ' ಎಂಬ ಪವಿತ್ರ ತಿಂಗಳು ಯಾಕೆ ಮತ್ತು ಹೇಗೆ?

   ಮುಹರಮ್' ಅಥವಾ 'ಮುಹರಂ-ಉಲ್-ಹರಂ... ಎಂಬ ಪವಿತ್ರ ತಿಂಗಳು                                                 - ಯಾಕೆ ಮತ್ತು ಹೇಗೆ?

✍ - ಎಂ.ಕೆ. ಮೇತ್ರಿ, ವಕೀಲರು.                     

ಮೊಹರಂ ಯಾವಾಗ?


ಕ್ರಿ.ಶ. 19ನೇ ಏಪ್ರಿಲ್ 622 ರಂದು ಮೊದಲಬಾರಿಗೆ ಹಿಜ್ರಿ ಎಂಬ ಹೊಸ ಇಸ್ಲಾಮಿನ ಶಕೆ ಶುರುವಾಯ್ತು ಹಾಗಾಗಿ ಇಸ್ವಿ 622 ಮೊಟ್ಟ ಮೊದಲ ಇಸ್ಲಾಮಿಕ್ ವರ್ಷ ಎಂದು ಗುರುತಿಸಲ್ಪಟ್ಟಿದೆ. ಈ ತಿಂಗಳನ್ನು ಮುಸ್ಲಿಮರು 'ಮುಹರಮ್' ಅಥವಾ 'ಮುಹರಂ-ಉಲ್-ಹರಂ' ಎಂದೂ ಕರೆಯುತ್ತಾರೆ, ಇದು ಹಿಜ್ರಿ ಕ್ಯಾಲೆಂಡರ್‌ನ ಮೊದಲ ತಿಂಗಳು ಆಗಿದ್ದರಿಂದ ಇಸ್ಲಾಮಿಕ್ ವರ್ಷಾರಂಭವನ್ನು ಸೂಚಿಸುತ್ತದೆ. ಇಸ್ಲಾಮಿಕ್ ಕ್ಯಾಲೆಂಡರಿನ ೧೨ ತಿಂಗಳುಗಳ ಪೈಕಿ ಇದು ಅಲ್ಲಾಹನ ಹೆಸರನ್ನು ಒಳಗೊಂಡ ಏಕೈಕ ತಿಂಗಳು ಎಂದರೆ ತಪ್ಪಾಗದು. ಪ್ರವಾದಿ ಮುಹಮ್ಮದ್ (ಸ) ಇದನ್ನು 'ಅಲ್ಲಾಹನ ಪವಿತ್ರ ತಿಂಗಳು' ಎಂದು ಉಲ್ಲೇಖಿಸಿದ್ದಾರೆ ಮತ್ತು ಇದನ್ನು ಅತ್ಯಂತ ಕೃಪಾಪೂರರ್ಣ ತಿಂಗಳು ಎಂದಿದ್ದಾರೆ.


ಇಸ್ಲಾಮಿಕ್ ನಂಬಿಕೆಯ ನಾಲ್ಕು ಪವಿತ್ರ ತಿಂಗಳುಗಳಲ್ಲಿ ಇದು ಒಂದಾಗಿದೆ, ಇದರ ಪ್ರಾಮುಖ್ಯತೆಯನ್ನು ಅದರ ಹೆಸರಿನಿಂದಲೆ ಸೂಚಿಸಲಾಗುತ್ತದೆ. 'ಮುಹರ್ರಂ' ಪದದ ಅಕ್ಷರಶಃ ಅರ್ಥ 'ನಿಷೇಧಿತ' - ಅಂದರೆ ಅದು ಎಷ್ಟು ಪವಿತ್ರವಾಗಿದೆಯೆಂದರೆ, ಅದರ ಸಮಯದಲ್ಲಿ ಕೆಲವು ಕ್ರಿಯೆಗಳನ್ನು ನಿಷೇಧಿಸಲಾಗಿದೆ, ಏಕೆಂದರೆ ಅವುಗಳು ಅದರ ಪವಿತ್ರತೆಯನ್ನು ಉಲ್ಲಂಘಿಸುತ್ತವೆ. ಮೊಹರಂ ತಿಂಗಳು ಮತ್ತು ಅಲ್ಲಾನ ಮನೆ (ಅಲ್-ಮಸ್ಜಿದ್ ಅಲ್-ಹರಾಮ್) ಎರಡೂ ಒಂದೇ ಅರೇಬಿಕ್ ಮೂಲ ಪದದಿಂದ ಅವುಗಳ ಹೆಸರುಗಳನ್ನು ಪಡೆದಿವೆ; ಇವೆರಡೂ ಪವಿತ್ರ ಸ್ಥಳಗಳಾಗಿದ್ದು, ಇಲ್ಲಿ ಮಾಡಲ್ಪಡುವ ಪ್ರತಿಯೊಂದು ಕಾರ್ಯವು (ಒಳ್ಳೆಯದು ಅಥವಾ ಕೆಟ್ಟದು), ಎರಡುಗಳನ್ನೂ ಮಾಪನ ಮಾಡುವಾಗ ಇವುಗಳ ಭಾರ ಅಧಿಕವಾಗಿರುತ್ತದೆ.


ಮೊಹರಂ ಏಕೆ ವಿಶೇಷವಾಗಿದೆ?

‘ಆಕಾಶಗಳನ್ನು ಭೂಮಿಯನ್ನು ಸೃಷ್ಟಿಸಿದ ದಿನ (ಮೊದಲ್ಗೊಂಡು) ಅಲ್ಲಾಹನ ಎಣಿಕೆಯ ಅನುಸಾರ ಮಾಸಗಳ ಸಂಖ್ಯೆ ಹನ್ನೆರಡಾಗಿದೆ. ಅವುಗಳ ಪೈಕಿ ನಾಲ್ಕು ಮಾಸಗಳು ಆದರಣೀಯವಾಗಿವೆದರಣೀಯವಾಗಿವೆ. ಇದೇ ಶಾಶ್ವತವಾದ ಧರ್ಮ ನಿಯಮವಾಗಿದೆ. ಆದುದರಿಂದ ಆ ಮಾಸಗಳಲ್ಲಿ ನಿಮಗೆ ನೀವೇ ಅನ್ಯಾಯವೆಸಗಬೇಡಿರಿ. (ಪ. ಕುರಾನ್, 9:36)


ಈ ಶ್ಲೋಕಕ್ಕೆ ಸಂಬಂಧಿಸಿದಂತೆ, ಇಬ್ನ್ ಕದೀರ್ (ರ) ವಿವರಿಸುತ್ತಾರೆ, 'ಅಲ್ಲಾಹನು ತನ್ನ ಸೃಷ್ಟಿಯಿಂದ ಗಣ್ಯರಾಗಿದ್ದವರನ್ನು ಆರಿಸಿಕೊಂಡಿದ್ದಾನೆ: ದೇವದೂತರ ಒಳಗಿಂದ ಅವನು ಸಂದೇಶವಾಹಕರನ್ನು ಆರಿಸಿಕೊಂಡನು, ಮಾನವಕುಲದಿಂದ ಅವನು ಸಂದೇಶವಾಹಕರನ್ನು ಆರಿಸಿಕೊಂಡನು, ವಾಕ್ ಕೌಶಲ್ಯದಿಂದ ಅವನು ತನ್ನ ಸ್ಮರಣೆಯನ್ನು ಆರಿಸಿಕೊಂಡನು (ಝಿಕ್ರ್ / ನಾಮಸ್ಮರಣೆ) ಭೂಮಿಯ ಮೇಲೆ ಇರುವ ಜಾಗಗಳಲ್ಲಿ ಅವನು ಮಸೀದಿಗಳನ್ನು ಆಯ್ಕೆ ಮಾಡಿಕೊಂಡನು, ತಿಂಗಳುಗಳ ಪೈಕಿ ಅವನು ರಂಜಾನ್ ಮತ್ತು ಪವಿತ್ರ ತಿಂಗಳುಗಳನ್ನು ಆಯ್ಕೆ ಮಾಡಿದನು ... ಆದ್ದರಿಂದ, ಅಲ್ಲಾನಿಂದ ಆಯ್ಕೆ ಮಾಡಲ್ಪಟ್ಟದ್ದನ್ನು ಭಕ್ತಿಪೂರ್ವವಾಗಿ ಗೌರವಿಸಿ, ತಿಳುವಳಿಕೆ ಮತ್ತು ಬುದ್ಧಿವಂತಿಕೆ ಉಳ್ಳ ಜನರು ಆತನಿಂದ ಆರಿಸಲ್ಪಟ್ಟದ್ದನ್ನು ಗೌರವಿಸುತ್ತಾರೆ. (ತಫ್ಸೀರ್ ಇಬ್ನ್ ಕದೀರ್). ಆದ್ದರಿಂದ, ಮೊಹರಂ ಮಾಸ ವಿಶೇಷವಾಗಿದೆ ಏಕೆಂದರೆ ಅಲ್ಲಾಹನು ಅದನ್ನು ಆರಿಸಿಕೊಂಡಿದ್ದಾನೆ. ಈ ಪವಿತ್ರ ತಿಂಗಳಲ್ಲಿ ‘ನಮ್ಮನ್ನು ನಾವೇ ಅನ್ಯಾಯ ಮಾಡಿಕೊಳ್ಳಬಾರದು’ ಎಂದು ಅವನು ನಮಗೆ ಆಜ್ಞಾಪಿಸುತ್ತಾನೆ, ಇದರರ್ಥ ನಾವು ಪರಿಶುದ್ಧ ವೈಚಾರಿಕತೆ ಮತ್ತು ನೀತಿವಂತ ನಡವಳಿಕೆಯನ್ನು ಹೊಂದಿದ್ದೇವೆ ಮತ್ತು ಪಾಪಕ್ಕೆ ಬೀಳುವುದಿಲ್ಲ ಎಂದು ಖಚಿತಪಡಿಸಿಕೊಳ್ಳುವುದು.


ನಾಲ್ಕು ಪವಿತ್ರ ತಿಂಗಳುಗಳು ಯಾವುವು?

ಅಲ್ಲಾಹನು ರಮಝಾನ್ ಹೊರತು ಪಡಿಸಿ ಇತರ ನಾಲ್ಕು ಪವಿತ್ರ ಮಾಸಗಳೆಂದರೆ 1)ಮೊಹರಂ 2)ರಜ್ಜಬ್, 3)ದುಲ್-ಖಅದಾ (ಜುಲ್-ಕಾಯ್ದಾ) ಮತ್ತು 4) ದುಲ್-ಹಿಜ್ಜಾ (ಜುಲ್-ಹಜ್ಜ್) ಗಳನ್ನು ಪವಿತ್ರ ತಿಂಗಳುಗಳಾಗಿ ಮಹಾಮಹಿಮ ಅಲ್ಲಾಹನು ಆರಿಸಿಕೊಂಡಿದ್ದಾನೆ.


ಪವಿತ್ರ ಪ್ರವಾಡಿವರ್ಯರ (ಸ) ಕಾಲದ ಐತಿಹಾಸಿಕ ಹಿನ್ನಲೆಯನ್ನ ಅದ್ಧ್ಯಯನ ಮಾಡಿದಾಗ ನಮಗೆ ಕಾಣುವ ವಿಚಾರಗಳು ಎಂದರೆ, ದುಲ್-ಖಅದಾ, ಧುಲ್-ಹಿಜ್ಜಾ ಮತ್ತು ಮುಹರಮ್ ಈ ಮೂರು ಪವಿತ್ರವಾದ ಮಾಸಗಳಲ್ಲಿ ಡಕಾಯಿತರ, ಕಳ್ಳಕಾಕರ ಅಥವಾ ಯುದ್ಧದ ಅಪಾಯಗಳ ಭಯವಿಲ್ಲದೆ ಯಾತ್ರಿಕರು ಸುರಕ್ಷಿತವಾಗಿ ಹಜ್ ಯಾತ್ರೆ ಮಾಡಲು ಅನುಮತಿಸಲಾಗಿತ್ತು. ಅವರು ಹಜ್ ಮಾಡಲು ಪ್ರಯಾಣಿಸುವಾಗ ಧುಲ್-ಖಅದ ಸಮಯದಲ್ಲಿ ಹೋರಾಟ, ಹೊಡೆದಾಟ ಗಳನ್ನು ನಿಷೇಧಿಸಲಾಗಿತ್ತು; ಧುಲ್-ಹಿಜ್ಜಾ ಮಾಸದಲ್ಲಿ ಅವರು ಮಕ್ಕಾ ನಗರ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಜ್ ನಿರ್ವಹಿಸುತ್ತಿರುವಾಗ; ಮತ್ತು ಮೊಹರಂ, ಅವರು ಹಜ್‌ನಿಂದ ಮನೆಗೆ ಹಿಂದಿರುಗುತ್ತಿರುವಾಗ. ಈ ಪದ್ಧತಿ ಅಥವಾ ಮಾನದಂಡವನ್ನು ಇಸ್ಲಾಮಿಕ್ ಪೂರ್ವದಲ್ಲಿ ಅರಬ್ಬರು ಎತ್ತಿಹಿಡಿದಿದ್ದರು ಮತ್ತು ಅಲ್ಲಾಹನು ಇದನ್ನು ತನ್ನ ಕುರಾನ್‌ನಲ್ಲಿ ದೃಢಪಡಿಸುತ್ತಾನೆ. ಇದರ ಮದ್ಯ ರಜ್ಜಬ್ ಎಂಬ ತಿಂಗಳು ಹಿಜ್ರಿ ಕ್ಯಾಲೆಂಡರಿನ ಏಳನೇ ತಿಂಗಳಾಗಿದ್ದು ಇದೂ ಕೂಡ ಒಂದು ಪವಿತ್ರ ಮಾಸವಾಗಿ ನಿಂತಿದೆ. ಐತಿಹಾಸಿಕವಾಗಿ ನೋಡಿದಾಗ, ಜನರು ಬಯಸಿದಲ್ಲಿ ಈ ಮಾಸದಲ್ಲಿ ಉಮ್ರಾ ನಿರ್ವಹಿಸಲು ಅವಕಾಶ ನೀಡುವುದಾಗಿತ್ತು. ಈ ನಾಲ್ಕು ಮಾಸಗಳ ಹೊರತು ರಮಝಾನ್ ಮತ್ತು ಅದರ ವಿಶೇಷತೆಗಳ ಬಗ್ಗೆ ಸಾಮಾನ್ಯ ವಾಗಿ ಎಲ್ಲಾರಿಗೂ ತಿಳಿದಿದೆ ಹಾಗಾಗಿ ರಮಝಾನ್ ಬಗ್ಗೆ ಈ ಬರಹದಲ್ಲಿ ಹೆಚ್ಚು ಬೆಳಕು ಚೆಲ್ಲಲಾಗಿಲ್ಲ.


ಮೊಹರಂನ ಪ್ರಯೋಜನಗಳೇನು?


ನಮ್ಮಲ್ಲಿ ಅನೇಕರು ರಂಜಾನ್ ತಿಂಗಳ ಮಹತ್ವವನ್ನು ಅರ್ಥಮಾಡಿಕೊಂಡಿದ್ದರೂ, ಸಾಮಾನ್ಯವಾಗಿ ಮೇಲೆ ಹೇಳಲಾದ ನಾಲ್ಕು ಪವಿತ್ರ ತಿಂಗಳುಗಳನ್ನು ನಿರ್ಲಕ್ಷಿಸಿದ್ದೇವೆ. ಆದಾಗ್ಯೂ ಕೂಡ ಈ ಮಾಸಗಳು ನಮಗೆ ಅಲ್ಲಾಹನ ಕರುಣೆ ಮತ್ತು ಅನುಗ್ರಹವನ್ನು ಪಡೆಯಲು ಅವಕಾಶಗಳ ಕಲ್ಪಿಸುತ್ತವ, ಈ ನಾಲ್ಕು ಪವಿತ್ರ ತಿಂಗಳುಗಳಲ್ಲಿ ಅಲ್ಲಾಹನಿಗೆ ಹತ್ತಿರವಾಗಲು ಉತ್ತಮ ಸಮಯವೆಂದು ಅಲ್ಲಾಹನೇ ನಿರ್ದಿಷ್ಟವಾಗಿ ಆಯ್ಕೆಮಾಡಿದ್ದಾನೆ.


ಮೊದಲೇ ಹೇಳಿದಂತೆ, ಕಾಬಾ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಮ್ಮ ಕಾರ್ಯಗಳು ಹೆಚ್ಚು ಭಾರವನ್ನು ಹೊಂದಿರುತ್ತವೆ ಅಂದರೆ ಅಲ್ಲಿ ಮಾಡುವ ಪಾಪಕ್ಕೆ ಹೆಚ್ಚಿನ ಶಿಕ್ಷೆ ಇದ್ದರೆ ಅಲ್ಲಿ ಮಾಡುವ ಪುಣ್ಯಕ್ಕೆ ಹೆಚ್ಚಿನ ಪ್ರತಿಫಲ ಇದ್ದೆ ಇರುತ್ತದೆ ಎಂಬ ನಂಬಿಕೆ, ಆದರೆ ನಮ್ಮ ಕೆಟ್ಟ ಕಾರ್ಯಗಳಿಂದ ಹೆಚ್ಚು ಪಾಪಗಳನ್ನು ಗಳಿಸುವ ಅಪಾಯವೂ ಇರುವುದರಿಂದಲೇ ಅಲ್ಲಾಹನು ನಿಮ್ಮ ಮೇಲೆ ನೀವೇ ಅನ್ಯಾಯ ಮಾಡಿಕೊಳ್ಳಬೇಡಿ ಎಂದು ಆಜ್ಞಾಪಿಸುತ್ತಾನೆ. ಇದರರ್ಥ ನಮ್ಮ ಸಂಬಂಧಗಳಲ್ಲಿ, ಕೆಲಸದಲ್ಲಿ, ನಮ್ಮ ಪ್ರಾರ್ಥನೆಯಲ್ಲಿ, ನಮ್ಮ ಸಮಯ ನಿರ್ವಹಣೆಯಲ್ಲಿ ನಾವು ಹೇಗೆ ವರ್ತಿಸುತ್ತೇವೆ ಎಂದರ್ಥ ಅದಲ್ಲದೆ ನಮ್ಮ ಆರೋಗ್ಯವನ್ನು ನಾವು ಹೇಗೆ ಕಾಳಜಿ ವಹಿಸುತ್ತೇವೆ, ನಾವು ದುಶ್ಚಟಕ್ಕೆ ಬಲಿಯಾಗಿ ನಮ್ಮ ಆರೋಗ್ಯ ಹೇಗೆ ಹಾಳು ಮಾಡಿಕೊಟ್ಟುತ್ತಿದ್ದೇವೆ ಎಂಬುದರ ಕುರಿತು ನಾವು ಹೆಚ್ಚು ಜಾಗರೂಕರಾಗಿರಬೇಕು. ಪವಿತ್ರವಾದ ಉದ್ದೇಶದಿಂದ ಮಾಡುವ ಪ್ರತಿಯೊಂದು ಕ್ರಿಯೆಯು ಉತ್ತಮ ಪ್ರತಿಫಲಕ್ಕೆ ಅವಕಾಶವಾಗಬಹುದು!


ಮೊಹರಂನಲ್ಲಿ ದೈವ ಕೃಪೆಯ ಲಾಭವನ್ನು ಪಡೆಯಲು ಸುಲಭವಾದ ಮಾರ್ಗಗಳ ಕಿರು ಪಟ್ಟಿಯನ್ನು ಇಲ್ಲಿ ಕೊಡಲಾಗಿದೆ:


  1. ಹೆಚ್ಚು ಹೆಚ್ಚು ಅಲ್ಲಾಹನ ನಾಮ ಸ್ಮರಣೆ ಮಾಡುವುದು.

  2. ಹೆಚ್ಚು ಎಚ್ಚು ದರೂದ್-ಸಲಾಂ ಹೇಳುವುದು!  (ಇದು ಪ್ರವಾದಿ (ಸ) ಮತ್ತು ಸ್ವರ್ಗದ ಜನರಿಗೆ  ತಿಳಿಸುವ ಶುಭಾಶಯವಾಗಿದೆ, ಮತ್ತು ಅಂತಹ ಸರಳ ಕ್ರಿಯೆಯು ಅಸಂಖ್ಯಾತ ಪ್ರತಿಫಲಗಳ ಆಗರವಾಗಿದೆ ಮತ್ತು 

  3. ಅಲ್ಲಾಹನಲ್ಲಿ ನಮ್ಮ ಪಾಪಗಳ ಕ್ಷಮೆಯನ್ನು ಯಾಚಿಸುವುದು.

  4. ಎಲ್ಲರನ್ನೂ ನೋಡಿ (ಸೋಮವಾರ ಬೆಳಿಗ್ಗೆಯೂ ಸಹ) ಮುಗುಳ್ ನಗುತ್ತಿರಿ. ಈ ಸರಳ ಕ್ರಿಯೆಯು ಇಡೀ ವರ್ಷತುಂಬಾ ನಾವು ಪಾಲಿಸಲೇಬೇಕು ಆದರೆ ಮೊಹರಂ ಸಮಯದಲ್ಲಿ ಅಲ್ಲಾಹನಿಗೆ ಹೆಚ್ಚು ಖುಷಿ ಪಡಿಸುತ್ತದೆ.

  5. ನಿಯಮಿತವಾಗಿ ಸದಾಕಾ (ನಿಯಮಿತ ಸ್ವಯಂ ಪ್ರೇರಿತ ದಾನ) ನೀಡುವುದು. 

  6. ಆರೋಗ್ಯ ಸುಧಾರಿಸಿಕೊಳ್ಳುವುದು - ಮೊಹರಂ ಇಸ್ಲಾಮಿಕ್ ಹೊಸ ವರ್ಷದ ಆರಂಭವಾಗಿದೆ, ಆದ್ದರಿಂದ ನೀವು ವರ್ಷಪೂರ್ತಿ ದೈವೀ ಪ್ರತಿಫಲವನ್ನು ಪಡೆದುಕೊಳ್ಳುವ ಸಂಕಲ್ಪಗಳನ್ನು ಮಾಡಲು ಮತ್ತು ಉತ್ತಮ ಅಭ್ಯಾಸ ಹವ್ಯಾಸಗಳನ್ನು ರೂಡಿಸಿಕೊಳ್ಳಲು(ಸ್ಥಾಪಿಸಲು) ಇದು ಪರಿಪಕ್ವ ಸಮಯವಾಗಿದೆ. 

  7. ಉಪವಾಸ ಆಚರಣೆ - ನಿರ್ದೇಶಿತ ಉಪವಾಸಗಳ ಹಾಗೂ ಉತ್ತಮ ಆಹಾರ ಸೇವನೆಯ ರೂಡಿ, ಹೆಚ್ಚು ದೈಹಿಕ ಶ್ರಮ ಮಾಡುವ ಮೂಲಕ, ಆರೋಗ್ಯಕರ ನಿದ್ರೆಯ ದಿನಚರಿಯನ್ನು ಹೊಂದುವ ಮೂಲಕ ನಮ್ಮ ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದು. ಹೌದು, ನಮ್ಮ ಆರೋಗ್ಯವನ್ನು ನೋಡಿಕೊಳ್ಳುವುದು ಕೂಡ ಅಲ್ಲಾಹನ ದೃಷ್ಟಿಯಲ್ಲಿ ಒಂದು ಪ್ರಾರ್ಥನೆ ಯಾಗಿದೆ ಅಥವಾ ಪ್ರತಿಫಲದಾಯಕ ಕ್ರಿಯೆಯಾಗಿದೆ 

  8. ನಮ್ಮ ದೇಹವು ನಮ್ಮದಲ್ಲ ಅಲ್ಲಾಹನ ಅಮಾನತ್ (ಅವನು ಕೊಟ್ಟ ಸಾಲ) ವಾಗಿದೆ!

  9. ಮೊಹರಂ ಪ್ರಯುಕ್ತ ಹೊಸವರ್ಷದ ಹೊಸ ನಿರ್ಧಾರಗಳು, ಸ್ವಯಂ ಜೀವನಶೈಲಿಯ ಕೆಲವು ಬದಲಾವಣೆಗಳನ್ನು ಮಾಡುವ ಠರಾವುಗಳು ಮಾಡಿಕೊಂಡು ಜೀವನವನ್ನು ಬದಲಾಯಿಸಿಕೊಳ್ಳಿ ಅಲ್ಲಾಹನ ಮಾರ್ಗದರ್ಶನ ಖಂಡಿತ ಸಾಧ್ಯ. ಇದರಿಂದ ನೀವು ಲೆಕ್ಕವಿಲ್ಲದಷ್ಟು ಪ್ರತಿಫಲಗಳನ್ನು ಅಲ್ಲಾಹನಿಂದ ಗಳಿಸಬಹುದು.

  10. ಇತರರ ಮೇಲೆ ನಾವು ಅನ್ಯಾಯ ವ್ಯಸಗಿದ್ದಲ್ಲಿ ಅವರ ಕುರಿತು ಕ್ಷಮೆಯನ್ನು ಕೇಳುವುದು. ಮೊಹರಂನಲ್ಲಿ ಪಾಪಗಳು ಹೆಚ್ಚು ಭಾರವಾಗಿರುವುದರಿಂದ(ಅದಕ್ಕೆ ಹೆಚ್ಚಿನ ಶಿಕ್ಷೆ ಇರುತ್ತದೆ), ಈ ತಿಂಗಳಲ್ಲಿ ನೀವು ಸಾಧ್ಯವಾದಷ್ಟು ಹೆಚ್ಚು-ಹೆಚ್ಚಾಗಿ ಜನರ ಕುರಿತು, ಅಲ್ಲಾಹನಕುರಿತು ಕ್ಷಮೆಆಚಿಸುವುದು ಅಥವಾ ಬಡವರಿಗೆ ಸಹಾಯ, ಹಸಿದವರಿಗೆ ಊಟ, ಬಾಯಾರಿದವರಿಗೆ ನೀರು, ಪಾನಕ, ತಂಪು - ಪಾನೀಯಗಳನ್ನು ನೀಡುವ ಮೂಲಕ ನಮ್ಮ ಪಾಪಗಳನ್ನು ಅಳಿಸಿಹಾಕಬೇಕು, ಇದು ಮಹಾನ್ ಸದಾಕಾ ಏ ಜರಿಯಾ ಆಗಿ ಪರಿಣಮಿಸಬಹುದು.

  11. ಹೆಚ್ಚು - ಹೆಚ್ಚು ಖುರಾನ್ ಓದಿರಿ, ಅರ್ಥೈಸಿಕೊಳ್ಳಿ, ಪಾಲಿಸಿ ಮತ್ತು ಇತರರಿಗೆ ಇದರ ಪಾಠ ನೀಡಿ. ಈ ತಿಂಗಳಲ್ಲಿ ಅಲ್ಲಾಹನಿಗೆ ಹತ್ತಿರವಾಗಲು ಇದು ಪರಿಪೂರ್ಣ ಮಾರ್ಗವಾಗಿದೆ! ಇದನ್ನು ಮಾಡಲು ದಿನಕ್ಕೆ ಕೇವಲ 10-15 ನಿಮಿಷಗಳು; ನಾವೇ ಸಮಯವನ್ನು ಹೊಂದಿಸಿ ಕೊಂಡು ಮತ್ತು ಶಿಸ್ತುಬದ್ಧರಾಗಿ! ಆಶಾದಾಯಕವಾಗಿ, ಈ ಉತ್ತಮ ಅಭ್ಯಾಸ/ಹವ್ಯಾಸವನ್ನು ಸ್ಥಾಪಿಸಿದರೆ ಈ ಹೊಸ ವರ್ಷದ ನಿರ್ಣಯಕ್ಕೆ  ಗಟ್ಟಿಯಾಗಿ ಅಂಟಿಕೊಳ್ಳುಲು ಅನುವಾಗುತ್ತದೆ.

  12. ನಿಜವಾಗಿಯೂ ಈ ಎಲ್ಲ ಕ್ರಿಯೆಗಳು ಮೊಹರಂಗೆ ಸೀಮಿತವಾಗಿಲ್ಲ, ಆದರೆ ಅವುಗಳನ್ನು ಹೆಚ್ಚು ಶಿಫಾರಸ್ಸು ಮಾಡಲಾಗಿದ್ದು ವರ್ಷದ ಮೊದಲ ತಿಂಗಳಾಗಿದ್ದರಿಂದ ಮತ್ತು ಈ ಕೃಪಾಪೂರ್ವಕ ತಿಂಗಳಲ್ಲಿ ಅವುಗಳನ್ನು ಹೆಚ್ಚಿಸುವುದು ಅರ್ಥಪೂರ್ಣವಾಗಿದೆ, ಕಾರಣ ಮೇಲೆ ಹೇಳಿದ ಪವಿತ್ರ ಕುರಾನಿನ ಆಜ್ಞೆ ಯಾಗಿದೆ!


ಮೊಹರಂ ಸಮಯದಲ್ಲಿ ಕೆಲವು ಶಿಫಾರಸು ಕ್ರಮಗಳು ಅಥವಾ ಸುನ್ನತ್ ಯಾವುವು?


ಮೊಹರಂ ಸಮಯದಲ್ಲಿ (ಇಡೀ ತಿಂಗಳ ಉಪವಾಸವನ್ನು ರಂಜಾನ್‌ಗೆ ಮಾತ್ರ ಮೀಸಲಿಟ್ಟಿದ್ದರೂ) ಸಾಧ್ಯವಾದಷ್ಟು ಉಪವಾಸ ಮಾಡಲು ಹೆಚ್ಚು ಶಿಫಾರಸು ಮಾಡಲಾಗಿದೆ. ಅಲ್ಲಾಹನ ಸಂದೇಶವಾಹಕರು (ಸ) ಹೇಳಿದರು, 'ರಂಜಾನ್ ನಂತರದ ಅತ್ಯುತ್ತಮ ಉಪವಾಸವು ಅಲ್ಲಾಹನ ಪವಿತ್ರ ತಿಂಗಳಾದ ಮುಹರ್ರಂ ನಲ್ಲಿ...' (ಮುಸ್ಲಿಂ ಎಂಬ ಹದೀಸ್ ಸಂಗ್ರಹಣೆಯಿಂದ ಆಯ್ಕೆ)


ವಾಸ್ತವವಾಗಿ, ಮುಹರ್ರಂನ ಪವಿತ್ರತೆಯು ಅದೆಷ್ಠಿದೆ ಎಂದರೆ, ಜಾಹಿಲಿಯಾ (ಅಜ್ಞಾನ) ದಿನಗಳಲ್ಲಿ ಖುರೈಷಿಗಳು ಸಹ ಈ ತಿಂಗಳ ಕೆಲವು ದಿನಗಳಲ್ಲಿ ಉಪವಾಸ ಮಾಡುತ್ತಿದ್ದರು. ಅಂತಹ ಒಂದು ದಿನವು ಅಶುರಾ ದಿನವಾಗಿದೆ (ಮೊಹರಂನ 10 ನೇ ದಿನ), ಇದು ಅಲ್ಲಾಹನು ಪ್ರವಾದಿ ಮೂಸಾ (ಅ) ಮತ್ತು ಅವರ ಜನರನ್ನು ಫೇರೋನ ಬಂಧನದಿಂದ ಮುಕ್ತಗೊಳಿಸುವುದನ್ನು ಆಚರಿಸುತ್ತದೆ: ಪ್ರಯುಕ್ತ ಅಲ್ಲಾನ ಪವಿತ್ರ ಪ್ರವಾದಿಯ ಆದೇಶದ ಮೇರೆಗೆಮುಸ್ಲಿಮರು ಕನಿಷ್ಠ ಎರಡು ದಿನ ಉಪವಾಸವನ್ನು ಆಚರಿಸುವುದು ಕಡ್ಡಾಯವಾಗಿದೆ ಅದು ಹೇಗೆಂದರೆ ಮೊಹರಂನ ಹತ್ತನೇ ದಿನ ಕಡ್ಡಾಯವಾಗಿ ಮಾಡಲೇಬೇಕು ಅದರ ಜೊತೆಗೆ 9ನೇ ದಿನ ಅಥವಾ 11ನೇ ದಿನ ಎರಡರಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಂಡು ಉಪವಾಸ ಮಾಡಬಹುದಾಗಿದೆ.


ಅಲ್ಲಾಹನ ಸಂದೇಶವಾಹಕರು (ಸ) ಅಶುರಾ ದಿನದ ಉಪವಾಸವು ಕಳೆದ ವರ್ಷದ ಸಣ್ಣ ಪಾಪಗಳನ್ನು ಪರಿಹರಿಸುತ್ತದೆ (ಮುಸ್ಲಿಂ) ಎಂದು ಹೇಳಿದರು. ಆದ್ದರಿಂದ, ಈ ದಿನದಂದು ಉಪವಾಸ ಮಾಡಲು ಹೆಚ್ಚು ಶಿಫಾರಸು ಮಾಡಲಾಗಿದೆ.


ಪ್ರವಾದಿ (ಸ) ಅವರು ತಮ್ಮ ಉಮ್ಮಾ ಮತ್ತು ಇತರ ಪುಸ್ತಕದ ಜನರ ನಡುವೆ ವ್ಯತ್ಯಾಸವನ್ನು ತೋರಿಸಲು ಮೊಹರಂನ 9 ಮತ್ತು / ಅಥವಾ 11 ರಂದು ಉಪವಾಸ ಮಾಡಲು ನಮಗೆ ಸಲಹೆ ನೀಡಿದರು ಮತ್ತು ನಮಗೆ ತಿಳಿದಿರುವಂತೆ, ಅವರ ಸುನ್ನತ್ ಅನ್ನು ಅನುಸರಿಸುವುದು ಅಪಾರವಾದ ದೈವ ಕೃಪೆಯನ್ನು ತರುತ್ತದೆ. ಈ ಅದ್ಭುತ ದಿನದ ಬಗ್ಗೆ, ಅದರ ಇತಿಹಾಸದಿಂದ ಅದರ ಹಲವಾರು ಲಾಭಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು  'ಅಶುರಾ ದಿನದ ಕುರಿತು ಇನ್ನೊಂದು ಬ್ಲಾಗ್ ಪೋಸ್ಟ್ ಅನ್ನು ಅತೀ ಶೀಘ್ರದಲ್ಲಿ ಬರೆಯಲಾಗುವುದು.


ಮೊಹರಂ ಸಮಯದಲ್ಲಿ ನಾನು ನನ್ನ ಝಕಾತ್ ನೀಡಬಹುದೇ?


   ಮೊಹರಂನಲ್ಲಿ ನಮ್ಮ ಝಕಾತ್ ಪಾವತಿಸಲು ಯಾವುದೇ ನಿರ್ದಿಷ್ಟ ಶಿಫಾರಸು ಇಲ್ಲ, ಆದರೇ, ಪ್ರವಾದಿ (ಸ) ರವರ ಕಾಲದಲ್ಲಿ, ಅಲ್ಲಾಹನು ಮೆಚ್ಚಿದ ಈ ಪವಿತ್ರ ತಿಂಗಳಾದ ಮೊಹರಂ ನ ಒಂದನೇ ತಾರೀಕಿನಂದು ಝಕಾತನ್ನು ಸಂಗ್ರಹಿಕೊಳ್ಳಲಾಗುತ್ತಿತ್ತು.


      ನಮ್ಮ ಝಕಾತ್ ಅನ್ನು ಇಡೀ ವರ್ಷತುಂಬೆಲ್ಲ ಪಾವತಿಸಲೂ ಕೂಡಾ ಅವಕಾಶವಿದೆ, ಹೀಗೆ ಬಯಸಿದರೆ ನಾವೂ ಮೊದಲು ನಮ್ಮ ಝಕಾತ್ ಅನ್ನು ಸರಿಯಾಗಿ ಲೆಕ್ಕ ಹಾಕಿ ಅದನ್ನು ಹನ್ನೆರಡರಿಂದ ಭಾಗಿಸಿಕೊಳ್ಳಬೇಕು. ಈ ವರ್ಷದಿಂದಲೇ ಪ್ರತಿತಿಂಗಳು ಬರುವ ಮಾಸಿಕ ಭಾಗವನ್ನು ನಾವು ಬಡವರಿಗೆ, ದೀನರಿಗೆ, ದಲಿತರಿಗೆ, ಅನಾಥ ಮಕ್ಕಳಿಗೆ, ವಿದುವೆಯರಿಗೆ ಹಾಗೂ ವಿಶೇಷವಾಗಿ ಶೈಕ್ಷಣಿಕ ಉದ್ದೇಶಕ್ಕಾಗಿ ಧನ ಸಹಾಯವನ್ನು ಮಾಡಬಹುದಾಗಿದೆ.


ಅನಾಥರ ಹಾಗೂ ಕಡುಬಡವರ ಮೂಲಭೂತ ಅವಶ್ಯತೆಗಳನ್ನು ನಮ್ಮ ಝಕಾತ್ ದಿಂದ ಪ್ರಾಯೋಜಿಸುವ ನಿಟ್ಟಿನಲ್ಲಿ ನಾವು ಇಂತಹ ಕಡುಬಡವರ ಮಕ್ಕಳ ಶಾಲಾ ಜವಾಬ್ದಾರಿಯನ್ನು ಹೊತ್ತುಕೊಳ್ಳಬಹುದು. ಈ ಮಾಸಿಕ ಪಾವತಿಗಳಿಂದ ಅವರ ಸಾಮಾಜಿಕ ರಕ್ಷಣೆಯನ್ನು ಮಾಡಬಹುದು. ಯಾವುದಾದರೂ ಬಡ ಮತ್ತು ಅನಾಥ ಮಗುವನ್ನು ನೀವು ಕಿಫಾಲಾ ಪಡೆದುಕೊಳ್ಳಲು ಬಯಸಿದಲ್ಲಿ ನಮ್ಮ ಸಂಸ್ಥೆಗೆ ಸಂಪರ್ಕಿಸಬಹುದು ನಂತರ ಅದರ ಸಂಪೂರ್ಣ ಜವಾಬ್ದಾರಿಯನ್ನು ಪಡೆದು ಸದರಿ ಮಗುವಿನ ಸಂಪೂರ್ಣ ಶೈಕ್ಷಣಿಕ ಹಾಗೂ ಇತರೆ ಖರ್ಚನ್ನು ತೆಗೆದುಕೊಂಡು ನೇರವಾಗಿ ನಮ್ಮ ಶಾಲಾ ಆಡಳಿತಕ್ಕೆ ವರ್ಗಾಯಿಸಬಹುದು. (Rainbow Trust, ಎಂಬ ಹೆಸರಿನ ವಿದ್ಯಾಸಂಸ್ಥೆಯು, ವಿಜಯಪುರ ಜಿಲ್ಲೆಯ ತಾಳಿಕೋಟೆ ಎಂಬ ಪಟ್ಟಣದಲ್ಲಿ, ಶೈಕ್ಷಣಿಕ ಹಾಗೂ ಇತರ ಸಾಮಾಜಿಕ ಕಳಕಳಿಯನ್ನು ಒಳಗೊಂಡ, ವಿಶೇಷವಾಗಿ ಬಡವರ, ದೀನದಲಿತರ, ವಿಧುವೆಯರ, ವಿಚ್ಛೇದಿತೆಯರ ಹಾಗೂಅನಾಥ ಮಕ್ಕಳ ವಿದ್ಯಾಭ್ಯಾಸದ ಕುರಿತು ವಿಶೇಷ ಚಿಂತನೆಯೊಂದಿಗೆ ಆರಂಭಿಸಲ್ಪಟ್ಟ ಸಂಸ್ಥೆಯಾಗಿದ್ದು ದಾನಿಗಳು ಈ ಕೆಳಗಿನ ದೂರವಾಣಿ ಸಂಖ್ಯೆಯ ಮೂಲಕ ನಮ್ಮನ್ನು ಸಂಪರ್ಕಿಸಬಹುದು.


ಹೀಗೆ ಮಾಡಲು ಬಯಸಿದರೆ ನಾವೂ ನಮ್ಮ ಮಕ್ಕಳೊಂದಿಗೆ ಮತ್ತೇ ಒಂದೋ ಎರಡೋ ಬಡ ಮಕ್ಕಳನ್ನು ಉತ್ತಮ ಭವಿಷ್ಯಕ್ಕೆ ಕೊಂಡೊಯ್ಯ ಬಹುದು. ಹೀಗೆ ನಮ್ಮ ಶ್ರೀರಕ್ಷೆಯಲ್ಲಿ ಪಡೆದ ಮಗುವಿನ ಜೀವನವನ್ನು ನಾವು ಸಂಪೂರ್ಣವಾಗಿ ಪರಿವರ್ತಿಸಬಹುದು! ನೀವು ಹೀಗೆ ಮಾಡಲು ಬಯಸಿದಲ್ಲಿ ನಮ್ಮ ಸಂಸ್ಥೆಗೆ ಸಂಪರ್ಕಿಸಿದರೆ ನಮ್ಮ ಕಡೆಯಿಂದ ಸಂಪೂರ್ಣ ಬೆಂಬಲ ಹಾಗೂ ಮಾರ್ಗದರ್ಶನವನ್ನು ನಿಮಗೆ ನೀಡಲಾಗುವುದು.


ಮುಸಲ್ಮಾನರ ಕೈಯಲ್ಲಿರುವ ಈ ಝಕಾತ್ ಮತ್ತು ಇತರ ದಾನಗಳ ಶಸ್ತ್ರಾಸ್ತ್ರಗಳು ಸಾಮಾಜಿಕ ಪಿಡುಗುಗಳ ವಿರುದ್ಧ ಹೋರಾಡಲು ಅಲ್ಲಾಹನು ನಮಗೆ ದಯಪಾಲಿಸಿದ್ದಾನೆ ಆದರೆ ನಾವು ಅದನ್ನು ಸದುಪಯೋಗ ಪಡಿಸಿಕೊಳ್ಳುವ ಶರತ್ತು ಇದೆ. ನಮ್ಮ ಸಂಸ್ಥೆಯಲ್ಲಿ ನಾವು ಹಾಕಿಕೊಂಡ ಹೆಚ್ಚಿನ ಯೋಜನೆಗಳು ಜಕಾತ್ ಗೆ ಅರ್ಹವಾಗಿವೆ, ನಮ್ಮ ಈ ಮನವಿ ಮತ್ತು ಅಭಿಯಾನಗಳಿಂದ ಬಡತನವನ್ನು ನಿರ್ಮೂಲನೆ ಮಾಡುವ ನಮ್ಮ ದೀರ್ಘಾವಧಿಯ ಕೆಲಸದವರೆಗೆ. ಯಾವ ಯೋಜನೆಗೆ ಕೊಡುಗೆ ನೀಡಬೇಕೆಂದು ನಿಮಗೆ ನಿರ್ಧರಿಸಲು ನೀವು ನಮ್ಮ ಸಂಸ್ಥೆಗೆ ಸಂಪರ್ಕಿಸಿ, ಹೀಗೆ ನಿರ್ಧಾರ ಕೈಕೊಳ್ಳಲು ಅಸಾಧ್ಯವಾದರೆ ನೀವು ನಮ್ಮ ಝಕಾತ್ ನಿಧಿಗೆ ಸಹ ನೇರವಾಗಿ ಧನ ಸಹಾಯವನ್ನು ನೀಡಬಹುದು. ನಮ್ಮಲ್ಲಿರುವ ತಜ್ಞರು ಅದನ್ನು ಹೆಚ್ಚು ಅಗತ್ಯವಿರುವ ಕಡೆಯಲ್ಲಿ ನಿಯೋಜಿಸುತ್ತಾರೆ. ತಮ್ಮ ಹಣದ ಒಂದೊಂದು ರೂಪಾಯಿಯ ಲೆಕ್ಕವನ್ನು ತಮಗೆ ನೀಡಲಾಗುವುದು.


ಪ್ರವಾದಿ (ಸ) ವರ್ಯರ ನಂತರದಲ್ಲಿ ನಡೆದ ಮೋಹರಂ ತಿಂಗಳಿನ ಘಟನಾವಳಿಗಳು.


    ಪ್ರವಾದಿ(ಸ) ರವರ ನಂತರ 4 ಪ್ರಮುಖ ಖಲೀಫಾ (ರ. ಅ) ರವರು ಗಳು ಸತ್ಯ ವಿಶ್ವಾಸಿಗಳನ್ನು ಒಗ್ಗೂಡಿಸಿ ಇಸ್ಲಾಮಿನ ಐಕ್ಯತೆ ಮತ್ತು ನ್ಯಾಯ ಸ್ಥಾಪನೆಗಾಗಿ ಸೆಣಸಿದರು. ಆದರೆ ಕೊನೆಯ ಮುಖ್ಯ ಖಲೀಫಾ (ರ. ಅ.) ರವರ ಮಕ್ಕಳು ಹಾಗೂ ಸಮಸ್ತ ಕುಟುಂಬವನ್ನೇ ಕೊಂಡು ಹಾಕಿದ ಅಮಾನವೀಯ ಘಟನೆಯ ಬಗ್ಗೆ ಪ್ರತ್ಯೇಕ ಬರಹವನ್ನು ನೀಡಲಾಗುವುದು.


✍ ನಿಮ್ಮ ಪ್ರೀತಿಯ

ಎಂ.ಕೆ. ಮೇತ್ರಿ, ವಕೀಲರು.

ದೂ.ಸಂ. 9739-459-677.


Sunday, July 3, 2022

Maloji Raje Bhonsle's Tomb...

 


ಮಾಳೊಜೀ ರಾಜೆ ಭೋಂಸ್ಲೆ...

       ಈ ಮೇಲಿನ ಚಿತ್ರದಲ್ಲಿರುವ ಮೂರು ಕಟ್ಟಡಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ನನಗನ್ನಿಸಿದ್ದು... 'ಇದಾವುದೋ ಸೂಫಿಸಂತನ ಗೋರಿಯೋ'.... 'ಮುಸ್ಲಿಮರ ಪವಿತ್ರ ಸ್ಥಳವೋ... ಅಥವಾ ದರ್ಗಾ ಅಥವಾ ಖಾನಖ್ವಾ ಇಲ್ಲವೇ ಮುಸ್ಲಿಮರ ಸಂಪ್ರದಾಯದಂತೆ ಕಟ್ಟಿರುವಂತಹ ಅದಾವುದೋ ಕಟ್ಟಡವೋ' ಅಥವಾ ಭಾರತವನ್ನಾಳಿದ ಕೆಲವುಮುಸ್ಲಿಮರು ಎನಿಸಿಕೊಂಡಿರುವ ಅಂತಹ ರಾಜರುಗಳ ಅಥವಾ ಅವರ ರಾಣಿಯರ ಗೋರಿಯೋ ಎಂಬ ಪ್ರಪ್ರಥಮ ಅಂದಾಜು ಅಥವಾ ಊಹೆ ಬರುವುದು ಪ್ರತಿಯೊಬ್ಬ ಇತಿಹಾಸವನ್ನು ಅರಿತ ಭಾರತೀಯನ ದೃಷ್ಟಿಕೋನಕ್ಕೆ ಸಹಜವಾದ ವೈಚಾರಿಕ ನಿಲುವು ಅನ್ನಬಹುದು. ನಾನು ಮೊದಲ ಬಾರಿ ಈ ಚಿತ್ರವನ್ನು ನೋಡಿದಾಗ ನನಗೂ ಹಾಗೆಯೇ ಭಾಸವಾಗಿತ್ತು. ಹಾಗೆಯೇ ಸುಮ್ಮನೆ ಈ ಚಿತ್ರದ ಕುರಿತು ಅಧ್ಯಯನ ಆರಂಭಿಸಿದಾಗ ನನಗೆ ಅಲ್ಲೊಂದು ಆಶ್ಚರ್ಯವೂ ಕಾದಿತ್ತು. ಈ ಕಟ್ಟಡ ಒಂದು ಸಮಾಧಿಯಾಗಿದೆ. ಯಾರದು ಗೊತ್ತಾ??? ಭಾರತ ಕಂಡ ಹೆಮ್ಮೆಯ ರಾಜ ಛತ್ರಪತಿ ಶಿವಾಜಿ ಮಹಾರಾಜರ ಅಜ್ಜ ಅಂದರೆ, ಶಾಹಜೀ ರಾಜೇ ಭೋಂಸ್ಲೆ ಹಾಗೂ ಶರೀಫ್ ಜೀ ರಾಜೇ ಭೋಂಸ್ಲೆ ಅವರ ತಂದೆಯಾದ ಮಾಳೋಜೀ ರಾಜೇ ಭೋಂಸ್ಲೆಯವರ ಸಮಾಧಿ ಅಥವಾ ಗೋರಿ ಅಥವಾ ಅವರ ವಿಶ್ರಾಂತಿಯ ಸ್ಥಳವಾಗಿದೆ. ಇದು ಕೇವಲ ಕಾಕತಾಳೀಯ ಅಂದುಕೊಳ್ಳುವುದು ನಮ್ಮ ಪೂರ್ವಜರ ಕುರಿತು ನಮಗಿರುವ ನಿಷ್ಕಾಳಜಿ ಎನ್ನಬಹುದು. ಏಕೆಂದರೆ ನಮ್ಮ ಪೂರ್ವಜರ ಮನದಾಳವನ್ನು ಆರ್ಥೈಸಿಕೊಳ್ಳಬೇಕಾದದ್ದು ನಮ್ಮೆಲ್ಲರ ಕರ್ತವ್ಯ.

    ಮಾಳೋಜೀ ರಾಜೇ ಭೋಂಸ್ಲೆಯವರು ಬಹಳ ವರ್ಷಗಳಕಾಲ ಮಕ್ಕಳಾಗದೇ ಇದ್ದಾಗ ಮಹಾನ್ ಸೂಫಿ ಸಂತರಾಗಿದ್ದ 'ಹಜರತ್ ಶಾಹ್ ಶರೀಫ್ ಜೀ ರಹಮತುಲ್ಲಾಹಿ ಅಲೈ'... ಅವರ ದರ್ಗಾಕ್ಕೆ ಹೋಗಿ ಹರಕೆ ಹೊತ್ತು ತದನಂತರ ಅವರಿಗೆ ಎರಡು ಗಂಡುಮಕ್ಕಳಾಗಿ ಮೊದಲನೆಯವರು ಶಾಹ್ ಜೀ ಮತ್ತು ಎರಡನೇಯವರು ಶರೀಫ್ ಜೀ ಎಂದು ನಾಮಕರಣ ಪಡೆದುಕೊಂಡರು, ಆಗಿನ ಕಾಲಕ್ಕೆ ಹಾಗೂ ಅವತ್ತಿನ ಪುರುಷ ಪ್ರಧಾನ ಸಾಮಾಜಿಕ ವಿಚಾರಧಾರೆಗೆ ಅವಶ್ಯಕ ವಿಷಯವಾಗಿದ್ದು ಗಂಡು ಸಂತಾನ. ಹಾಗಾಗಿ ಮಾಳೋಜೀ ರಾಜೇ ಭೋಂಸ್ಲೆಯವರು ಅತೀವ ಸಂತುಷ್ಟರಾಗಿ ಸದರಿ ದರ್ಗಾದ ಪಕ್ಕದಲ್ಲಿ ಒಂದು ಕುಡಿಯುವ ನೀರಿನ ಹೊಂಡವನ್ನು ತೊಡಿಸಿದರು, ಇದರಿಂದ ದರ್ಗಾಕ್ಕೆ ಬರುವ ಜನರಿಗೆ ತುಂಬಾ ಸಹಾಯಕವಾಯಿತು. ಮಹಾರಾಷ್ಟ್ರದ ಸೂಫೀ ಪರಂಪರೆಯ ಜನರನ್ನು ಇದರ ಕುರಿತು ವಿಚಾರಿಸಿದಾಗ ಅವರು ಹೇಳುವ ಮಾತುಗಳು ತುಂಬಾ ವಿಶ್ವಸನೀಯ ಅನಿಸಿತು. ಆಗಿನ ಕಾಲದ ಭಾರತದಲ್ಲಿ ಧರ್ಮಗಳ ಮಧ್ಯ ವ್ಯತ್ಯಾಸ ಇರಲಿಲ್ಲ ಹಿಂದೂ ಅಥವಾ ಮುಸ್ಲಿಮರು ಅದೆಷ್ಟೋ ವಿವಿಧ ಪವಿತ್ರ ಸ್ಥಳಗಳಲ್ಲಿ ಜೊತೆ ಜೊತೆಯಾಗಿ ಧಾರ್ಮಿಕ ಕಾರ್ಯಗಳನ್ನು ಕೈಕೊಳ್ಳುತ್ತಿದ್ದರು, ಅಲ್ಲದೇ ವಿಶೇಷವಾಗಿ ಸೂಫಿಸಂತರ ಶಿಷ್ಯಂದಿರುಗಳ ಮದ್ಯ ಯಾವುದೇ ಧಾರ್ಮಿಕ ಭೇದಭಾವಗಳು ಇರಲಿಲ್ಲ. 


        ಮಾಳೋಜೀ ರಾಜೇ ಭೋಂಸ್ಲೆಯವರ ಜೀವನದಲ್ಲಿ ಅದೆಷ್ಟೋ ಅವರ ಆಚಾರ-ವಿಚಾರಗಳು ಸಂಪೂರ್ಣವಾಗಿ ಇಸ್ಲಾಂ ಧರ್ಮವನ್ನು ಹೋಲುತ್ತಿದ್ದವು. ಇದಕ್ಕೆ ಕಾರಣಗಳು ಸಾಕಷ್ಟಿವೆ ಆದರೆ ಮೊಘಲರಿಗಿಂತ ಮುಂಚೆ ಭಾರತವನ್ನು ಆಳುತ್ತಿದ್ದ ಸಾಕಷ್ಟು ಇಸ್ಲಾಂಧರ್ಮವನ್ನು ಒಪ್ಪಿಕೊಂಡ ರಾಜಮನೆತನಗಳು ಭಾರತದಲ್ಲಿನ ಕೆಳ ಸಮುದಾಯದ ಜನರಿಗೆ ಆಸ್ತಿ-ಪಾಸ್ತಿ ಹೊಂದುವ, ವಿದ್ಯೆಕಲಿಯುವ, ವ್ಯಾಪಾರ-ವ್ಯವಹಾರ ಮಾಡುವ ಹಾಗೂ ಸಂಪತ್ತನ್ನು ಹಣಕಾಸನ್ನು ಹೊಂದುವ ಅಧಿಕಾರಗಳನ್ನು, ರಾಜಕೀಯ ಅಧಿಕಾರ ಹಾಗೂ ಶಸ್ತ್ರ ಹಿಡಿಯುವ ಅಧಿಕಾರವನ್ನ ನೀಡಿದ್ದರು, ಅದೆಷ್ಟೋ ಮೂಲನಿವಾಸಿ ಸ್ಪರ್ಶ-ಅಸ್ಪೃಶ್ಯ ಸಮುದಾಯಗಳನ್ನು ತಮ್ಮ ಸೈನ್ಯದಲ್ಲಿ ಭರ್ತಿ ಮಾಡಿಕೊಳ್ಳುವುದಷ್ಟೇ ಅಲ್ಲದೇ, ಅವರಿಗೆ ಸೇನಾಪಡೆಗಳಲ್ಲಿ ವಿಶೇಷವಾದ ಅಧಿಕಾರಗಳು, ಅವರ ಸಾಮರ್ಥ್ಯ ವ ನಿಷ್ಠೆಗೆ ತಕ್ಕಂತೆ ಉನ್ನತ ಸ್ಥಾನಗಳನ್ನುಕೊಟ್ಟಿದ್ದರು ಜೊತೆಗೆ ಗ್ರಾಮಗಳಲ್ಲಿ ಹಳ್ಳಿಗಳಲ್ಲಿ ನಾಯಕತ್ವ ಸ್ಥಾನವಾಗಿದ್ದ ಪಾಟೀಲ್ ಗಿರಿ, ಜಮೀನ್ದಾರಿ, ಜಾಹಗೀರ್ ದಾರಿ ಎಂಬ ಹೆಸರುಗಳಲ್ಲಿ ಅವರಿಗೆ ವಿಶೇಷ ಸವಲತ್ತು, ಜಮೀನುಗಳು ಹಾಗೂ ಅಧಿಕಾರಗಳನ್ನು ಕೂಡ ನೀಡಿದ್ದರು ಹಾಗಾಗಿ ಮೂಲನಿವಾಸಿ ಜನರಿಂದ ಒಂದು ಭವ್ಯ ಸಾಮ್ರಾಜ್ಯದ ಅಡಿಪಾಯಹಾಕಲು ಸಾಧ್ಯವಾಗಿದ್ದು. ದಕ್ಷಿಣ ಭಾರತದಲ್ಲಿ ಇರುವ ಮುಸ್ಲಿಮ ರಾಜರು ಇಲ್ಲಿನ ಕೆಳಸಮುದಾಯದ ಜನರಿಗೆ ನೀಡುತ್ತಿದ್ದ ಪ್ರತಿನಿಧ್ಯವು ಸಾಮಾಜಿಕ ಶೋಷಣೆಯನ್ನೇ ಮಾಡುತ್ತಾ ಬಂದ ಧರ್ಮದ ಸ್ವಯಂ-ಘೋಷಿತ ವ್ಯವಸ್ಥಾಪಕರಿಗೆ ಕಂಠಕಪ್ರಾಯವಾಗಿತ್ತು. ಹಾಗಾಗಿ ಆಗಿನ ಕಾಲದ ಸೂಫಿಗಳ ಶಿಷ್ಯಂದಿರುಗಳಾದ ರಾಜಮನೆತನದವರು ಹಾಗೂ ಇಸ್ಲಾಮಿನ ಸಮಾನತೆಯ ವಿಚಾರಗಳನ್ನು ಒಪ್ಪಿ ಸೂಫಿಗಳ ಕೈಯಲ್ಲಿ ಧರ್ಮ ಧೀಕ್ಷೆಯನ್ನ ಪಡೆದ ಇಲ್ಲಿನ ಶೂದ್ರ ಸ್ವಾಭಿಮಾನಿಗಳು ಜೊತೆ ಜೊತೆಯಾಗಿ ಸಾಮಾಜಿಕ ಐಕ್ಯತೆಯನ್ನು ಮಾಡಿಕೊಂಡು ಅಧಿಕಾರದಲ್ಲಿ ಬಂದಿದ್ದರು, ಇದನ್ನು ಸಹಿಸದ ಪಟ್ಟಭದ್ರ ಹಿತಾಸಕ್ತಿಗಳು ಪರಸ್ಪರ ಭ್ರಾತೃತ್ವದ ಸಮಾಜವನ್ನು ಕಿತ್ತು ಹಾಕುವ ನಿಟ್ಟಿನಲ್ಲಿ, ದಕ್ಷಿಣದ ಸುಲ್ತಾನರಿಂದ ಅಧಿಕಾರ ಕಿತ್ತುಕೊಳ್ಳುವ ನಿಟ್ಟಿನಲ್ಲಿ ಮೊಘಲರ ಜೊತೆ ಕೈ ಮೀಲಾಯಿಸಿ ಇಲ್ಲಿನ ಮೂಲನಿವಾಸಿಗಳನ್ನು ಮತ್ತೆ ಗುಲಾಮಗಿರಿಗೆ ತಳ್ಳುವ ಎಲ್ಲ ಪ್ರಯತ್ನಗಳನ್ನು ಮಾಡಿದ್ದಾರೆ, ಇದಕ್ಕೆ ಕನ್ನಡಿ ಹಿಡಿಯುವ ಸಾಕ್ಷಿಯಾಗಿ ಶಿವಾಜಿ ಹಾಗೂ ಸಂಭಾಜಿ ಮಹಾರಾಜರುಗಳ ಮರಣದ ಇತಿಹಾಸವನ್ನು ಸರಿಯಾಗಿ ನಾವೆಲ್ಲ ಅರ್ಥ ಮಾಡಿಕೊಳ್ಳುವ ಅವಶ್ಯಕತೆ ಇದೆ. ಅವರ ಸಾವಿನಿಂದ ಯಾರಿಗೆ ಲಾಭವಿತ್ತು? ಇದನ್ನು ಹುಡುಕುವ ಯತ್ನ ಯಾಕೆ ನಮ್ಮ ಜನರು ಮುಂಚೆ ಮಾಡಿರಲಿಲ್ಲ? ಈಗ ಇತಿಹಾಸವು ಸ್ವಚಂದ್ಧವಾದ ನೀರಿನಂತೆ ಮುಂದೆ ಬಂದಿಂದೆ ಹಾಗಾಗಿ ಅವರ ಕಪಟ ನಾಟಕ ಇನ್ನು ಮುಂದೆ ನಡೆಯದು. ಮಾಳೋಜೀ ರಾಜೇ ಭೋಂಸ್ಲೆಯವರ ಜೀವನ ನಮಗೆಲ್ಲ ಮಾದರಿಯಾಗಲಿ, ಮೂಲನಿವಾಸಿ ಸಮುದಾಯಗಳು ಯಾವುದೇ ಜಾತಿಯಲ್ಲಿದ್ದರೂ ಅವರ ಶೋಷಣೆ ನಿಲ್ಲುವುದಿಲ್ಲ ಅದಕ್ಕೊಂದು ಸಂಪೂರ್ಣ ವಿರಾಮ ಹಾಕುವುದಾದರೆ ಶೈಕ್ಷಣಿಕ, ಸಾಮಾಜಿಕ ಹಾಗೂ ಧಾರ್ಮಿಕ ವಿಚಾರಗಳ ಮರು ವಿಮರ್ಶೆಗೆ ಕರೆ ಕೊಡಬೇಕು. ಸಮಾನತೆ ಹಾಗೂ ಮಾನವ ಭ್ರಾತೃತ್ವವನ್ನು ಒಪ್ಪುವ ಎಲ್ಲ ಧರ್ಮಗಳು ಒಂದೇ ಎಂಬ ಸಾರವನ್ನು ಈ ದೇಶದ ಬಹುಜನರಿಗೆ ಅರ್ಥೈಸಬೇಕು. 

ಜೈ ಭೀಮ್... ಜೈ ಭಾರತ್... ಜೈ ಟಿಪ್ಪೂ...